ಬೆಂಗಳೂರು: ನಗರದ ಮಿಲಾನ್ ಫರ್ಟಿಲಿಟಿ ಸೆಂಟರ್ ಗೆ ಆರೋಗ್ಯ ಇಲಾಖೆಯಿಂದ ಎರಡು ಗರ್ಭಾಶಯ ಕಸಿ(uterus transplants) ಮಾಡಲು ಅನುಮತಿ ಸಿಕ್ಕಿದೆ. ಕಳೆದ ಮೇ ತಿಂಗಳಲ್ಲಿ ಪುಣೆಯ ಗ್ಯಾಲಕ್ಸಿ ಕೇರ್ ಹಾಸ್ಪಿಟಲ್ ಎರಡು ಗರ್ಭಾಶಯ ಕಸಿ ಮಾಡಿದ ನಂತರ ಶೇಕಡಾ 75ರಷ್ಟು ಮಹಿಳೆಯರು ಈ ಆಸ್ಪತ್ರೆಗೆ ಭೇಟಿ ನೀಡಿ ತಮ್ಮ ಆರೋಗ್ಯ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಅವರಲ್ಲಿ ಬಹುತೇಕರು ಅವಿವಾಹಿತರು, ವಿದೇಶಿಯರು ಸೇರಿದ್ದಾರೆ. 150 ಮಂದಿ ಚಿಕಿತ್ಸೆಗೆ ವೈದ್ಯರ ಭೇಟಿಗೆ ಅಪಾಯ್ಟ್ ಮೆಂಟ್ ಪಡೆದುಕೊಂಡಿದ್ದಾರೆ.
ಇಂತಹ ಪರಿಸ್ಥಿತಿ ಕರ್ನಾಟಕದಲ್ಲಿ ಪುನರಾವರ್ತನೆಯಾಗುವುದನ್ನು ತಗ್ಗಿಸಲು ರಾಜ್ಯ ಕಸಿ ಸೂಕ್ತ ಪ್ರಾಧಿಕಾರದ ಸುಬೋಧ್ ಯಾದವ್, ಬೆಂಗಳೂರಿನಲ್ಲಿ ಎರಡು ಗರ್ಭಾಶಯ ಕಸಿಗೆ ಆರೋಗ್ಯ ಇಲಾಖೆಯಿಂದ ಅನುಮತಿ ಸಿಕ್ಕಿದರೂ ಕೂಡ ಇದನ್ನು ಸಂಶೋಧನೆಯ ಪ್ರಯೋಗವಾಗಿ ಪರಿಗಣಿಸಲಾಗುವುದು ಮತ್ತು ಕಾರ್ಯವಿಧಾನದ ವಾಣಿಜ್ಯೀಕರಣಕ್ಕೆ ಕಾನೂನುಬದ್ಧ ಆದ್ಯತೆಯನ್ನು ನಿಗದಿಪಡಿಸಿಲ್ಲ ಎಂದು ಹೇಳಿದರು.
ಗರ್ಭಾಶಯ ಕಸಿ ಯಾವುದೇ ರೋಗಗಳು ಅಥವಾ ಆರೋಗ್ಯ ತೊಂದರೆಗಳಿಗೆ ಸಂಬಂಧಿಸಿದ್ದಲ್ಲ. ಇದರ ಹಿಂದೆ ನೈತಿಕ ಮತ್ತು ಮಾನವೀಯ ಅಂಶಗಳು ಕೂಡ ಸೇರಿಕೊಂಡಿವೆ. ಇದಕ್ಕೆ ಶಿಫಾರಸು ಮಾಡಲು ನಾವು ಸೂಕ್ತ ಅಧಿಕಾರ ಹೊಂದಿರುವವರಲ್ಲ. ಹೀಗಾಗಿ ನಾವು ಈ ಎರಡು ಕಸಿ ವಿಧಾನವನ್ನು ವೈದ್ಯಕೀಯ ಸಂಶೋಧನೆಯೆಂದು ಪರಿಗಣಿಸುತ್ತಿದ್ದು ಇದರ ವಾಣಿಜ್ಯೀಕರಣಕ್ಕೆ ಯಾವುದೇ ಅನುಮತಿ ನೀಡುವುದಿಲ್ಲ ಎಂದು ಹೇಳಿದರು.
ಈ ಬಗ್ಗೆ ಮಾತನಾಡಿದ ಕಸಿ ಸೂಕ್ತ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಎಸ್.ಪ್ರಭಾಕರ್, ಬಂಜೆತನ ಒಂದು ರೋಗ. ಹೀಗಾಗಿ ನಾವು ಇದಕ್ಕೆ ಅನುಮತಿ ನೀಡಿದ್ದೇವೆ. ಇದಕ್ಕೆ ಅನುಮತಿ ನೀಡಿ ಒಂದು ತಿಂಗಳಾಯಿತು ಎಂದು ಹೇಳಿದರು.
ಮಿಲನ್ ಫರ್ಟಿಲಿಟಿ ಕೇಂದ್ರದ ಹಿರಿಯ ಉಪಾಧ್ಯಕ್ಷ ಡಾ.ಗೌತಮ್ ಟಿ.ಪಿ, ರಾಜ್ಯ ಸರ್ಕಾರದಿಂದ ಕೆಲವು ಅನುಮತಿಗಳು ಸಿಗಬೇಕಿದೆ. ಕಸಿ ವಿಧಾನವನ್ನು ಹೆಚ್ ಸಿಜಿ ಆಸ್ಪತ್ರೆಯಲ್ಲಿ ಮಾಡಲಾಗುವುದು. ಈ ಕುರಿತು ತಪಾಸಣೆ ಮಾಡಲಾಗಿದೆ. ದಿನಾಂಕ ಇನ್ನೂ ನಿರ್ಧಾರವಾಗಿಲ್ಲ ಎಂದು ತಿಳಿಸಿದರು.