ಬಾಂಬ್ ನಾಗ - ಮನೆಯಲ್ಲಿ ಪತ್ತೆಯಾದ ಹಣ
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಹಾಗೂ ರೌಡಿ ಶೀಟರ್ ಬಾಂಬ್ ನಾಗ ಅಲಿಯಾಸ್ ವಿ ನಾಗರಾಜ್ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಬಾಂಬ್ ನಾಗ ಒಂದು ವಾರದ ಹಿಂದೆಯೇ ಆತ್ಮಹತ್ಯೆಗೆ ಯತ್ನಿಸಿದ್ದು, ತನಗೆ ಆರೋಗ್ಯ ಸಮಸ್ಯೆ ಇರುವುದರಿಂದ ಇತರೆ ಕೈದಿಗಳೊಂದಿಗೆ ಬದಲಾಗಿ ಆಸ್ಪತ್ರೆ ವಾರ್ಡ್ ನಲ್ಲಿ ಪ್ರತ್ಯೇಕವಾಗಿ ಇರಿಸುವಂತೆ ಜೈಲಿನ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದನಂತೆ. ಆದರೆ ಜೈಲಿನ ಅಧಿಕಾರಿಗಳು ನಾಗನ ಬೇಡಿಕೆಯನ್ನು ತಿರಸ್ಕರಿಸಿದ್ದರಿಂದ ಶೌಚಾಲಯದಲ್ಲಿದ್ದ ಫಿನಾಯಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಜೈಲು ಮೂಲಗಳಿಂದ ತಿಳಿದು ಬಂದಿದೆ.
ಕಳೆದ ಏಪ್ರಿಲ್ 14ರಂದು ಶ್ರೀರಾಂಪುರದಲ್ಲಿರುವ ಬಾಂಬ್ ನಾಗನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದ ವೇಳೆ ಕೋಟ್ಯಂತರ ರುಪಾಯಿ ನಿಷೇಧಿತ 500 ಹಾಗೂ 1000 ರುಪಾಯಿ ನೋಟುಗಳು ಪತ್ತೆಯಾಗಿದ್ದವು. ದಾಳಿ ವೇಳೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ ನಾಗನನ್ನು ಮೇ 11ರಂದು ತಮಿಳುನಾಡಿನಲ್ಲಿ ಬಂಧಿಸಲಾಗಿತ್ತು.