ಹೊಸ್ ಮಾಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕೃಷ್ಣ ರೈ
ಬೆಂಗಳೂರು: ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣದಲ್ಲಿ ಬೆಳಗಿನ ಹೊತ್ತು ಎಂದಿನಂತೆ ಅಂದು ಕೂಡ ಪ್ರಯಾಣಿಕರು ತುಂಬಿತುಳುಕುತ್ತಿದ್ದರು. ಎಂದಿನಂತೆ ರಾಜಾಜಿನಗರದ ಮೆಟ್ರೊದಲ್ಲಿ ನಿತ್ಯ ಸಂಚರಿಸುವ 59 ವರ್ಷದ ಬಾಲಕೃಷ್ಣ ರೈ ತಮ್ಮ ಕೆಲಸದ ಸ್ಥಳ ಎಂ.ಜಿ.ರಸ್ತೆಗೆ ಹೋಗಲು ಕೆಂಪೇಗೌಡ ನಿಲ್ದಾಣದ ಪ್ಲಾಟ್ ಫಾರಂ 3 ರ ಲ್ಲಿ ಇಳಿದರು. ಆಗ ಓರ್ವ ಯುವಕ ಜನದಟ್ಟಣೆ ಮಧ್ಯೆ ಇವರನ್ನು ತಳ್ಳಿದನು. ಯುವಕ ನೂಕಿದ ರಭಸಕ್ಕೆ ರೈಯವರ ಸೊಂಟದ ಕೆಳಗೆ ಮೂಳೆ ಮುರಿದು ಪ್ಲಾಟ್ ಫಾರಂನಲ್ಲಿ ಬಿದ್ದರು.
ರಕ್ಷಣಾ ಇಲಾಖೆಯಲ್ಲಿ ಅಕೌಂಟ್ಸ್ ಆಫೀಸರ್ ಆಗಿರುವ ಬಾಲಕೃಷ್ಣ ರೈ ಇದೀಗ ನಗರದ ಹೊಸ್ಮಾಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಸೋಮವಾರ ಹಿಪ್ ಬದಲಾವಣೆ ಸರ್ಜರಿ ನಡೆಯಲಿದೆ. ಹೃದ್ರೋಗಿಯಾಗಿರುವ ಬಾಲಕೃಷ್ಣ ರೈಯವರಿಗೆ ಸಕ್ಕರೆ ಕಾಯಿಲೆ ಕೂಡ ಇದೆ. ಹಾಗಾಗಿ ಗುಣಮುಖವಾಗಲು ಕನಿಷ್ಠ 3 ತಿಂಗಳು ಬೇಕಾಗಬಹುದು ಎನ್ನುತ್ತಾರೆ ವೈದ್ಯರು.
ಘಟನೆ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಬಾಲಕೃಷ್ಣ ರೈ, ಮೆಜೆಸ್ಟಿಕ್ ಗೆ ಬೆಳಗ್ಗೆ 9.15ಕ್ಕೆ ತಲುಪುವ ರೈಲಿನಲ್ಲಿ ನಾನಿದ್ದೆ. ಇಳಿದು ತಿರುಗುವಷ್ಟರಲ್ಲಿ, ಓರ್ವ ವೇಗವಾಗಿ ನನ್ನನ್ನು ನೂಕಿದ. ರಭಸಕ್ಕೆ ನಾನು ಕೆಳಗೆ ಬಿದ್ದೆ. ಹಿಪ್ ಜಾರಿದ್ದರಿಂದ ತಲೆತಿರುಗಿತು. ನಂತರ ಮೆಟ್ರೊ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ವೀಲ್ ಚೇರ್ ನಲ್ಲಿ ಕೂರಿಸಿ ಆಂಬ್ಯುಲೆನ್ಸ್ ಗೆ ವ್ಯವಸ್ಥೆ ಮಾಡಿದರು. ಇಬ್ಬರು ಸಹ ಪ್ರಯಾಣಿಕರು ಆಸ್ಪತ್ರೆಗೆ ಕರೆತಂದು ದಾಖಲು ಮಾಡಿದರು ಎಂದು ನೆನೆಸಿಕೊಂಡರು.
ಪ್ಲಾಟ್ ಫಾರ್ಮ್ ನಲ್ಲಿ ಬಿದ್ದು ನನಗೆ ಪ್ರಜ್ಞೆ ಬರುವಷ್ಟರಲ್ಲಿ ಸುಮಾರು 50 ಪ್ರಯಾಣಿಕರು ನನ್ನನ್ನು ಸುತ್ತುವರಿದಿದ್ದರು. ಒಬ್ಬರು ನನಗೆ ನೀರು ಕೊಟ್ಟರು. ಮೆಟ್ರೊ ಸಿಬ್ಬಂದಿ ಆಸ್ಪತ್ರೆಗೆ ಬಂದ ಮೇಲೆ ನನ್ನ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಫೋನ್ ಮಾಡುತ್ತಿದ್ದಾರೆ ಎಂದು ರೈ ಸ್ಮರಿಸುತ್ತಾರೆ.
ಬೆಳಗ್ಗೆ ಮತ್ತು ಸಾಯಂಕಾಲ ಪೀಕ್ ಅವರ್ ನಲ್ಲಿ ಮಟ್ರೊ ನಿಲ್ದಾಣದಲ್ಲಿ ಇರುವ ವಿಪರೀತ ಜನದಟ್ಟಣೆಯಲ್ಲಿ ಪ್ರಯಾಣಿಕರು ತಮ್ಮ ಸುರಕ್ಷತೆ ಕಾಪಾಡುವುದು ಅಗತ್ಯವಾಗಿದೆ ಎನ್ನುತ್ತಾರೆ ರೈ.
ದಿನಕ್ಕೆ ಸುಮಾರು ಮೂರೂವರೆ ಲಕ್ಷ ಮೆಟ್ರೊ ಪ್ರಯಾಣಿಕರನ್ನು ನಿಭಾಯಿಸುವ ಕುರಿತು ಕೇಳಿದಾಗ ಉತ್ತರಿಸಿದ ಮೆಟ್ರೊ ಅಧಿಕಾರಿಯೊಬ್ಬರು, ನಾವು ಸರದಿಯಲ್ಲಿ ನಿಲ್ಲುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ. ಪ್ಲಾಟ್ ಫಾರಂ ನಲ್ಲಿ, ಎಸ್ಕಲೇಟರ್ ನಲ್ಲಿ ಜನದಟ್ಟಣೆ ಮಧ್ಯೆ ಓಡಿ ತಮಗೆ ಅಥವಾ ಬೇರೆಯವರಿಗೆ ಗಾಯ ಮಾಡಿಕೊಳ್ಳಬೇಡಿ ಎಂದು ಪ್ರಯಾಣಿಕರಿಗೆ ಪದೇ ಪದೇ ಹೇಳುತ್ತೇವೆ. ಆದರೆ ಅನೇಕ ಪ್ರಯಾಣಿಕರು ನಮ್ಮ ಮಾತು ಕೇಳುವುದಿಲ್ಲ ಎನ್ನುತ್ತಾರೆ.