ರಾಜ್ಯ

ಬೆಂಗಳೂರು ಮೂಲದ ಸಂಸ್ಥೆಯಿಂದ ಆಧಾರ್ ಮಾಹಿತಿ ಸೋರಿಕೆ!

Srinivasamurthy VN

ಬೆಂಗಳೂರು: ವ್ಯಕ್ತಿಯೊಬ್ಬರ ಬಯೋಮೆಟ್ರಿಕ್‌ ಸೇರಿದಂತೆ ಖಾಸಗಿ ಮಾಹಿತಿ ಒಳಗೊಂಡಿರುವ ಆಧಾರ್‌ ಸಂಖ್ಯೆಯ ಮಾಹಿತಿಯನ್ನು ಸೋರಿಕೆ ಮಾಡುತ್ತಿರುವ ಆರೋಪದಡಿ ಬೆಂಗಳೂರು ಮೂಲದ ಸಂಸ್ಥೆ ವಿರುದ್ಧ ದೂರು  ದಾಖಲಾಗಿದ್ದು, ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ.

ಬೆಂಗಳೂರಿನ ಇಂದಿರಾನಗರದಲ್ಲಿರುವ ಕ್ವಾರ್ತ್ ಟೆಕ್ನಾಲಜೀಸ್ ಕಂಪೆನಿ ವಿರುದ್ಧ ಎಫ್‌ಐಆರ್‌ ದಾಖಲಲಾಗಿದ್ದು, ಕಂಪೆನಿಯು ಆ್ಯಪ್‌ ಮೂಲಕ ಮಾಹಿತಿಯನ್ನು ಸೋರಿಕೆ ಮಾಡುತ್ತಿದೆ. ಅದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು  ಯುಐಎ ಬೆಂಗಳೂರು ಘಟಕದ ಉಪನಿರ್ದೇಶಕ ಅಶೋಕ್‌ ಲೆನಿನ್‌ ಅವರು ಹೈಗ್ರೌಂಡ್ಸ್‌ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಅಭಿನವ ಶ್ರೀವಾಸ್ತವ್‌ ಎಂಬುವರು ಕ್ಯುರ್ಥ್‌ ಟೆಕ್ನಾಲಜೀಸ್‌ ಕಂಪೆನಿ  ಹೆಸರಿನಲ್ಲಿ ಆ್ಯಪ್‌ ಅಭಿವೃದ್ಧಿಪಡಿಸಿ, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಹರಿಬಿಟ್ಟಿದ್ದಾರೆ. ಜತೆಗೆ ಆಧಾರ್‌ ವೆಬ್‌ಸೈಟ್‌ ನಿಂದ ದಾಖಲೆಗಳನ್ನು ಕದ್ದು, ಆ  ಆ್ಯಪ್‌ನಲ್ಲೇ ಅಪ್‌ಲೋಡ್‌ ಮಾಡಿದ್ದಾರೆ. ಹೀಗೆ ಅಪ್ ಲೋಡ್ ಆದ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ಆ್ಯಪ್‌ ಮೂಲಕ ಜನರಿಗೆ ಇ–ಕೆವೈಸಿ ಕೊಡುತ್ತಿದ್ದಾರೆ. ಇದಕ್ಕೆ ಆಧಾರ್‌ ಸಂಸ್ಥೆಯಿಂದ ಅನುಮತಿ ಪಡೆದಿಲ್ಲ ಎಂದು  ಆರೋಪಿಸಲಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ದೂರುದಾರರಾದ ಅಶೋಕ್‌ ಅವರು, "ಶ್ರೀವಾಸ್ತವ್‌ ಅವರು ಯಾರೋ ಬೇರೊಬ್ಬರ ಜತೆ ಸೇರಿಕೊಂಡು ಈ ಮಾಹಿತಿಯನ್ನು ಕದ್ದು ಸೋರಿಕೆ ಮಾಡುತ್ತಿದ್ದಾರೆ. ಈ ಕೃತ್ಯವು ಆಧಾರ್‌  ಕಾಯ್ದೆ ಸೆಕ್ಷನ್‌ 37 ಹಾಗೂ 38 ಅನ್ವಯ ಅಪರಾಧವಾಗುತ್ತದೆ ಎಂದು ಹೇಳಿದ್ದಾರೆ.

ಇನ್ನು ದೂರು ದಾಖಲಿಸಿಕೊಂಡಿರುವ ಹೈಗ್ರೌಂಡ್ಸ್‌ ಪೊಲೀಸರು, "ಆರೋಪಿ ಶ್ರೀವಾಸ್ತವ್‌ ವಿರುದ್ಧ ಅಪರಾಧ ಸಂಚು (ಐಪಿಸಿ 34),  ನಕಲಿ ದಾಖಲೆ ಸೃಷ್ಟಿ (ಐಪಿಸಿ 468), ನಕಲಿ ದಾಖಲೆಗಳನ್ನು ಅಸಲಿ ಎಂದು ಬಳಸುವುದು (ಐಪಿಸಿ  471) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದೇವೆ. ಸದ್ಯ ಆರೋಪಿಯು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ವಿಶೇಷ ತಂಡ ರಚಿಸಿದ್ದೇವೆ. ಇಂದಿರಾನಗರದ ಕಂಪೆನಿಯ ಕಚೇರಿಗೆ ಹೋಗಿ ಪರಿಶೀಲನೆ  ನಡೆಸಬೇಕಿದೆ ಎಂದು ಮಾಹಿತಿ ನೀಡಿದರು.

ವಿವಿಧ ಸಂಸ್ಥೆಗಳ ಮಾಹಿತಿ ಹೊಂದಿರುವ ಝೌಬ ಕಾರ್ಪ್ ಪ್ರಕಾರ ಅಕ್ಟೋಬರ್ 2012 ರಲ್ಲಿ ಕೋಲ್ಕತ್ತಾದಲ್ಲಿ ಕ್ವಾರ್ತ್ ಟೆಕ್ನಾಲಜೀಸ್ ಸಂಸ್ಥೆ ತಲೆ ಎತ್ತಿತ್ತು. ಈ ಸಂಸ್ಥೆ ಅನಧಿಕೃತವಾಗಿ ದತ್ತಾಂಶ ಸಂಸ್ಕರಣೆಯಲ್ಲಿ ತೊಡಗಿದ ಹಲವು  ಆರೋಪ ಎದುರಿಸುತ್ತಿದ್ದು, ಕಂಪೆನಿಯ ನಿರ್ದೇಶಕರು ಅಭಿನವ್ ಶ್ರೀವಾಸ್ತವ ಮತ್ತು ಪ್ರೇರಿತ್ ಶ್ರೀವಾಸ್ತವ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದೆ.

SCROLL FOR NEXT