ಬೆಂಗಳೂರು: ನೂತನವಾಗಿ ನೇಮಕಗೊಂಡಿರುವ ಪ್ರಾಂಶುಪಾಲರು ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿರುವ ಬಾಲ್ಡ್'ವಿನ್ ಬಾಲಕಿಯರ ಫ್ರೌಢಶಾಲೆ ಶಿಕ್ಷಕರು, ತರಗತಿ ಬಹಿಷ್ಕರಿಸಿ ಗುರುವಾರ ಪ್ರತಿಭಟನೆ ನಡೆಸಿದ್ದಾರೆ.
ರಿಚ್'ಮಂಡ್ ಟೌನ್ ರಸ್ತೆಯಲ್ಲಿರುವ ಬಾಲ್ಡ್'ವಿನ್ ಬಾಲಕಿಯರ ಫ್ರೌಢಶಾಲೆಗೆ ಹೊಸದಾಗಿ ನೇಮಕಗೊಂಡಿರುವ ಪ್ರಾಂಶುಪಾಲರು ಪ್ರತಿನಿತ್ಯ ಕಿರುಕುಳವನ್ನು ನೀಡುತ್ತಿದ್ದು, ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾ ನಿರತ ಶಿಕ್ಷಕರು ಆಗ್ರಹಿಸಿದ್ದಾರೆ.
ಶಾಲೆಯಲ್ಲಿ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರೊಬ್ಬರು ಪ್ರತಿಕ್ರಿಯೆನೀಡಿದ್ದು, ಶಾಲೆಯನ್ನು ನಾನು 15 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಎಂದೂ ಕೆಲಸದ ಬಗ್ಗೆ ಅಸಂತಸಗೊಂಡಿಲ್ಲ. ಆದರೆ, 2 ತಿಂಗಳ ಹಿಂದೆ ಹೊಸದಾಗಿ ನೇಮಕಗೊಂಡಿರುವ ಪ್ರಾಂಶುಪಾಲರು ಕೆಲಸ ಮಾಡಲು ಸಾಧ್ಯವಾಗದಂತೆ ಮಾಡುತ್ತಿದ್ದಾರೆ. ಅನಗತ್ಯವಾಗಿ ನಮ್ಮನ್ನು ಗುರಿ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಅವಹೇಳನಕಾರಿ ಪದಗಳನ್ನು ಬಳಕೆ ಮಾಡುತ್ತಾರೆ. ಶಾಲೆಯ ಅಧ್ಯಕ್ಷರು ನಗರರಿಂದ ಹೊರಗೆ ಹೋಗಿದ್ದರಿಂದಾಗಿ ಆಡಳಿ ಮಂಡಳಿಗಳು ಶಿಕ್ಷಕರ ಮನವೊಲಿಸಲು ಯತ್ನ ನಡೆಸುತ್ತಿದ್ದಾರೆಂದು ಹೇಳಿದ್ದಾರೆ.
ಶಾಲೆಯ ಅಧ್ಯಕ್ಷರು ಇಂದು ಭೇಟಿ ಮಾಡಲಿದ್ದಾರೆಂದು ನಮಗೆ ಆಡಳಿತ ಮಂಡಳಿ ಭರವಸೆ ನೀಡಿದೆ. ಒಂದು ವೇಳೆ ಅಧ್ಯಕ್ಷರು ಭೇಟಿಯಾಗದೇ ಹೋದಲ್ಲಿ ಮಹಿಳಾ ಆಯೋಗದ ಮೆಟ್ಟಿಲೇರಬೇಕಾಗುತ್ತದೆ ಎಂದು ಹೇಳಿದ್ದಾರೆ.
ಮೂರು ದಿನಗಳ ಹಿಂದೆ ಪ್ರಾಂಶುಪಾಲರು ಎಲ್ಲಾ ಶಿಕ್ಷಕರನ್ನು ಕರೆದು ಸಭೆಯನ್ನು ಏರ್ಪಡಿಸಿದ್ದರು. ಈ ವೇಳೆ ಕಡಿಮೆ ರಕ್ತದೊತ್ತಡದಿಂದಾಗಿ ಶಿಕ್ಷಕರೊಬ್ಬರು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದರು. ಗಂಟೆಗಟ್ಟಲೆ ನಿಲ್ಲಿಸಿದ್ದರಿಂದಾಗಿ ಶಿಕ್ಷಕಿ ಕೆಳಗೆ ಬಿದ್ದಿದ್ದರು. ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು ಎಂದು ಪ್ರತಿಭಟನಾ ನಿರತ ಶಿಕ್ಷಕರು ಆರೋಪಿಸಿದ್ದಾರೆ.
ತರಗತಿ ಬಹಿಷ್ಕರಿಸಿ ಶಿಕ್ಷಕರು ಪ್ರತಿಭಟನೆ ನಡೆಸಿದ್ದರಿಂದಾಗಿ ಬೆಳಿಗ್ಗೆ 8 ಗಂಟೆಗೆ ಶಾಲೆಗೆ ಬಂದಿದ್ದ ಮಕ್ಕಳು ಮತ್ತೆ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗುವಂತಾಗಿತ್ತು. ಕೆಲ ವಿದ್ಯಾರ್ಥಿಗಳ ಪೋಷಕರು ಕಚೇರಿ ಹಾಗೂ ಕೆಲಸಗಳಿಗೆ ಹೋಗಿದ್ದರಿಂದಾಗಿ ಶಾಲೆಯಲ್ಲಿ ಉಳಿದುಕೊಂಡಿದ್ದರು. ನಂತರ ಪೋಷಕರಿಗೆ ಮಾಹಿತಿ ನೀಡಿ ಮಕ್ಕಳನ್ನು ಕರೆದುಕೊಂಡು ಹೋಗುವಂತೆ ಆಡಳಿತ ಮಂಡಳಿ ತಿಳಿಸಿದ್ದಾರೆ.