ರಾಜ್ಯ

ಯಾವ ಶಾಸಕರ ಮೇಲೂ ಒತ್ತಡ ಹೇರಿಲ್ಲ: ಸಚಿವ ಡಿ.ಕೆ. ಶಿವಕುಮಾರ್ ಸ್ಪಷ್ಟನೆ

Srinivasamurthy VN

ರಾಮನಗರ: ಬಿಜೆಪಿಯಿಂದ ಕುದುರೆ ವ್ಯಾಪಾರ ತಪ್ಪಿಸುವ ಸಲುವಾಗಿ ಗುಜರಾತ್‌ ನ ಕಾಂಗ್ರೆಸ್ ಶಾಸಕರನ್ನು ಇಲ್ಲಿಗೆ ಕರೆ ತರಲಾಗಿದೆಯೇ ಹೊರತು ಯಾವುದೇ ಶಾಸಕರ ಮೇಲೂ ಒತ್ತಡ ಹೇರಿಲ್ಲ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ರಾಜ್ಯಸಭೆ ಚುನಾವಣೆ ಹಿನ್ನಲೆಯಲ್ಲಿ ಗುಜರಾತ್ ನಲ್ಲಿ ನಡೆಯುತ್ತಿರುವ ಆಪರೇಷನ್ ಕಮಲ ಭೀತಿಯಿಂದ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್ ಕಾಂಗ್ರೆಸ್ ಶಾಸಕರನ್ನು ನಿನ್ನೆ ತಡರಾತ್ರಿ ಭೇಟಿ ಮಾಡಿ ಇಂಧನ ಸಚಿವ  ಡಿಕೆ ಶಿವಕುಮಾರ್ ಅವರು ಚರ್ಚೆ ನಡೆಸಿದರು. ಬಳಿಕ ಈಗಲ್ಟನ್ ರೆಸಾರ್ಟ್‌ ನಿಂದ ಹೊರಗೆ ಬರುವಾಗ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್ ಅವರು, "ನಮ್ಮ ಯಾವುದೇ ಶಾಸಕರ ಮೇಲೂ ನಾವು ಒತ್ತಡ ಹೇರಿಲ್ಲ  ಅಥವಾ ಬೆದರಿಕೆ ಹಾಕಿಲ್ಲ. ಶಾಸಕರೆಲ್ಲರೂ ಸ್ವಇಚ್ಛೆಯಿಂದಲೇ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದು ಹೇಳಿದರು.

"ನಮ್ಮ ಶಾಸಕರ ಮೇಲೆ ಒತ್ತಡವಿದ್ದು, ಗುಜರಾತ್‌ನಲ್ಲಿ ಪ್ರವಾಹ ಪರಿಸ್ಥಿತಿ ಇರುವ ಕಾರಣ ಹೆಚ್ಚೆಚ್ಚು ದೂರವಾಣಿ ಕರೆಗಳು ಬರುತ್ತಿವೆ. ಹೀಗಾಗಿ ಅವರ ಮೊಬೈಲ್‌ ಗಳು ಸ್ವಿಚ್ ಆಫ್ ಆಗಿವೆ. ಆದರೆ ನಾವು ಯಾರಿಗೂ ಮೊಬೈಲ್  ಬಳಕೆಗೆ ನಿರ್ಬಂಧ ಹೇರಿಲ್ಲ. ಅಂತೆಯೇ ಯಾವ ಶಾಸಕರೂ ತಪ್ಪಿಸಿಕೊಂಡಿಲ್ಲ. ಎಲ್ಲರೂ ಜತೆಗೆ ಇದ್ದಾರೆ. ರಾಜ್ಯದ ವಿವಿಧ ಸ್ಥಳಗಳಿಗೆ ಪ್ರವಾಸ ತೆರಳಲಿದ್ದಾರೆ. ಆದರೆ ಎಲ್ಲಿಗೆ ಹೋಗಬೇಕು ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ' ಎಂದು  ಅವರು ಹೇಳಿದರು.

ಇದೇ ವೇಳೆ ಮಧ್ಯಾಹ್ನ 3.30ರ ಸುಮಾರಿಗೆ ಶಾಸಕರೇ ಮಾಧ್ಯಮದ ಮುಂದೆ ಬರಲಿದ್ದಾರೆ ಎಂದು ಅವರು ಹೇಳಿದರು. ಇದೇ ವೇಳೆ ಗುಜರಾತ್ ಪ್ರವಾಹದ ಕುರಿತು ಮಾತನಾಡಿದ ಡಿಕೆ ಶಿವಕುಮಾರ್ ಅವರು, ಅಲ್ಲಿಯೂ ಒಂದು  ಸರ್ಕಾರವಿದೆ. ಅವರೇ ಎಲ್ಲ ಪರಿಸ್ಥಿತಿಯನ್ನು ನಿಭಾಯಿಸುತ್ತಾರೆ. ಪ್ರವಾಸದ ವೆಚ್ಚವನ್ನು ಸ್ವತಃ ಶಾಸಕರೇ ಭರಿಸಲಿದ್ದಾರೆ ಎಂದೂ ಶಿವ ಕುಮಾರ್ ಅವರು ಹೇಳಿದರು.

SCROLL FOR NEXT