ಬೆಂಗಳೂರು: ಬೈಕ್ ಅಪಘಾತದಲ್ಲಿ ಯುವಕರಿಬ್ಬರು ತೀವ್ರವಾಗಿ ಗಾಯಗೊಂಡಿದ್ದು ಆ್ಯಂಬುಲೆನ್ಸ್ ಗೆ ಕರೆ ಮಾಡಿ ಒಂದು ಗಂಟೆ ತಡವಾಗಿ ಬಂದಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಯುವಕ ಸಾವನ್ನಪ್ಪಿದ್ದಾನೆ ಎಂದು ಆತನ ಸ್ನೇಹಿತರು ಆರೋಪಿಸಿದ್ದಾರೆ.
ವೀಕೆಂಡ್ ಮಸ್ತಿಗಾಗಿ ಆರು ಮಂದಿ ಯುವಕರ ಗುಂಪು ಮೂರು ಬೈಕ್ ನಲ್ಲಿ ನಂದಿ ಬೆಟ್ಟಕ್ಕೆ ತೆರಳುತ್ತಿದ್ದು ಈ ವೇಳೆ ದೇವನಹಳ್ಳಿಯ ಕುಂದನ ರಸ್ತೆ ಬಳಿ ಬೈಕ್ ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸವಾರರು ಗಾಳಿಯಲ್ಲಿ ತೂರಿ ಕೆಳಕ್ಕೆ ಬಿದ್ದಿದ್ದಾರೆ. ಇದರಲ್ಲಿ ಬೈಕ್ ನ ಹಿಂದೆ ಕುಳಿತ್ತಿದ್ದ ಯುವಕ ಅಪಘಾತ ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೋರ್ವ ಗಂಭೀರ ಗಾಯಗಳಿಂದ ನರಳುತ್ತಿದ್ದ. ಅಪಘಾತ ಬಳಿಕ ನಾವು ಆ್ಯಂಬುಲೆನ್ಸ್ ಗೆ ಕರೆ ಮಾಡಿದೆವು. ಆಗ ಅವರ 20 ನಿಮಿಷದಲ್ಲಿ ಬರುವುದಾಗಿ ಹೇಳಿ ಒಂದು ಗಂಟೆ ತಡವಾಗಿ ಬಂದರು ಎಂದು ಮೃತ ಯುವಕರ ಸ್ನೇಹಿತ ಶಬ್ಬೀರ್ ಹೇಳಿದ್ದಾನೆ.
ಮೃತ ಯುವಕರನ್ನು ಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲಾ ಮೂಲದ 23 ವರ್ಷದ ಅಜೋ ರಾಜು ಮತ್ತು 22 ವರ್ಷದ ಅಪ್ಪು ಶಾಜಿ ಎಂದು ಗುರುತಿಸಲಾಗಿದೆ. ಈ ಅಪಘಾತ ಮುಂಜಾನೆ 4.45ರ ಸುಮಾರಿಗೆ ನಡೆದಿದ್ದು ರಾಜು ಮತ್ತು ಶಾಜಿ ಆ್ಯಕ್ಟೀವ್ ಹೊಂಡಾದಲ್ಲಿ ತೆರಳುತ್ತಿದ್ದರು. ಬೈಕ್ ಅನ್ನು ರಾಜು ಓಡಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.