ರಾಜ್ಯ

ಬೀಫ್ ಫೆಸ್ಟ್ ಗೆ ಕೌಂಟರ್: ರಾಮಚಂದ್ರಾಪುರ ಮಠದಿಂದ ಮಿಲ್ಕ್ ಫೆಸ್ಟ್ ಗೆ ಆಯೋಜನೆ

Srinivas Rao BV
ಬೆಂಗಳೂರು: ಕೇಂದ್ರ ಸರ್ಕಾರ ಗೋಹತ್ಯೆಯನ್ನು ತಡೆಗಟ್ಟಲು ತಂದಿರುವ ಹೊಸ ನಿಯಮಗಳನ್ನು ವಿರೋಧಿಸಿ ಹಲವೆಡೆ ಬೀಫ್ ಫೆಸ್ಟ್ ಗೆ ಕರೆ ನೀಡಲಾಗಿತ್ತು. ಈಗ ಬೀಫ್ ಫೆಸ್ಟ್ ಗೆ ಕೌಂಟರ್ ನೀಡಲು ರಾಮಚಂದ್ರಾಪುರ ಮಠ ಮಿಲ್ಕ್ ಫೆಸ್ಟ್(ಹಾಲು ಹಬ್ಬ) ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಹಾಲು ಹಬ್ಬ(ಮಿಲ್ಕ್ ಫೆಸ್ಟ್) ಕಾರ್ಯಕ್ರಮ ನಡೆಯಲಿದೆ. ಗೋಮಾಂಸ ಸೇವಿಸುವುದು ಆರೋಗ್ಯಕ್ಕೆ ಒಳಿತಲ್ಲ, ಬದಲಾಗಿ ಹಸುವಿನ ಹಾಲು ಹಾಗೂ ಅದರ ಉತ್ಪನ್ನಗಳಿಂದ ಎಲ್ಲಾ ವಯಸ್ಸಿನವರಿಗೂ ಆರೋಗ್ಯ ವೃದ್ಧಿಸುತ್ತದೆ ಎಂದು ದೇಶಿ ಗೋವು ತಳಿಗಳನ್ನು ಉಳಿಸುವುದಕ್ಕೆ ಪ್ರಸಿದ್ಧಿ ಪಡೆದಿರುವ ರಾಮಚಂದ್ರಾಪುರ ಮಠ ಹೇಳಿಕೆ ನೀಡಿದೆ. 
ಗೋಹತ್ಯೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿತ್ತು. ಇದನ್ನು ವಿರೋಧಿಸಿ ಹಲವು ರಾಜಕೀಯ ಪಕ್ಷಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ವಿವಿಧ ರಾಜ್ಯಗಳಲ್ಲಿ ಬೀಫ್ ಫೆಸ್ಟ್ ನ್ನು ಆಯೋಜಿಸಿದ್ದವು. ಮಠದ ಕಾರ್ಯದರ್ಶಿ ಈ ಬಗ್ಗೆ ಮಾತನಾಡಿದ್ದು, ಬೀಫ್ ಫೆಸ್ಟ್ ಗೆ ವಿರುದ್ಧವಾಗಿ ನಾವು ಮಿಲ್ಕ್ ಫೆಸ್ಟ್(ಹಾಲು ಹಬ್ಬ)ವನ್ನು ಆಯೋಜಿಸಿದ್ದೇವೆ. ಗೋಮಾಂಸ ಸೇವಿಸುವುದರಿಂದ ಆರೋಗ್ಯದ ಮೇಲೆ ಉಂಟಾಗುವ ಸಮಸ್ಯೆಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ ತಿಳಿಸುತ್ತೇವೆ ಹೇಳಿದ್ದಾರೆ. 
ಜೂ.11 ರಂದು ವಿಜಯನಗರದಲ್ಲಿರುವ ಶ್ರೀ ಭಾರತೀ ವಿದ್ಯಾಲಯದಲ್ಲಿ ಮಿಲ್ಕ್ ಫೆಸ್ಟ್ ಪ್ರಾರಂಭವಾಗಲಿದೆ. ಕಾರ್ಯಕ್ರಮದಲ್ಲಿ ಆಯೋಜಕರು ಹಸುವಿನ ಹಾಲಿನಿಂದ ಮಾಡಿದ ಪಾಯಸವನ್ನು ವಿತರಣೆ ಮಾಡಲಿದ್ದಾರೆ ಹಾಗೂ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲಿದ್ದಾರೆ. ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲೂ ಈ ಕಾರ್ಯಕ್ರಮ ಹಮ್ಮಿಕೊಳ್ಳುವುದಕ್ಕೆ ಮಠ ಚಿಂತನೆ ನಡೆಸಿದೆ. 
SCROLL FOR NEXT