ರಾಜ್ಯ

ಬೈಕ್ ಡೆಲಿವರಿ ವಿಳಂಬ: ಬೆಂಗಳೂರಿನಲ್ಲಿ ಮಾಜಿ ಸೈನಿಕನಿಂದ ಶೋ ರೂಂ ಮಾಲೀಕನ ಮೇಲೆ ಫೈರಿಂಗ್

Shilpa D
ಬೆಂಗಳೂರು: ಹೊಸ ಬೈಕ್ ಡೆಲಿವರಿ ನಿಧಾನವಾಯ್ತು ಎಂಬ ಕಾರಣಕ್ಕೆ ಆಕ್ರೋಶಗೊಂಡ ಮಾಜಿ ಸೈನಿಕನೊಬ್ಬ, ಶೋರೂಂ ಮಾಲೀಕನ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದೆ.
ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿ ಬುಕ್ ಮಾಡಿದ್ದ ಬೈಕ್ ಕೊಡಲು ವಿಳಂಬವಾಯಿತು ಎನ್ನುವ ಕಾರಣಕ್ಕೆ, ಮಾಜಿ ಸೈನಿಕ ಜಗದೀಶ್ ಶೋರೂಂ ಮಾಲೀಕನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಜಗದೀಶ್  106 ಪ್ಯಾರಾಚೂಟ್ ರೆಜಿಮೆಂಟ್'ನಲ್ಲಿ ಯೋಧರಾಗಿದ್ದರು. 2016ರಲ್ಲಿ ಸ್ವಯಂ ನಿವೃತ್ತಿ ಪಡೆದು, ಬಳಿಕ ಕನ್ನಿಂಗ್ ಹ್ಯಾಮ್ ರಸ್ತೆಯ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದರು. ಕಳೆದ ಮಾರ್ಚ್​ 31 ರಂದು ಸ್ಯಾಟಲೈಟ್ ಮೋಟರ್ಸ್ ನಲ್ಲಿ, ಹೋಂಡಾ ಲಿವಾ ಬೈಕ್ ಬುಕ್ ಮಾಡಿದ್ದ ಜಗದೀಶ್'ಗೆ, ನಿನ್ನೆ ಬೈಕ್ ಡಿಲಿವರಿಯಾಗಬೇಕಿತ್ತು. ಆದರೆ ಕೆಲ ಕಾರಣಗಳಿಂದ ಡಿಲಿವರಿ ತಡವಾಗಿದ್ದು, ಮಾಲೀಕರೊಂದಿಗೆ ವಾಗ್ವಾದಕ್ಕಿಳಿದ ಜಗದೀಶ್ ಏಕಾಏಕಿ ಫೈರಿಂಗ್ ಮಾಡಿದ್ದಾರೆ.
ಇನ್ನೂ ಈ ಘಟನೆಯಲ್ಲಿ ಶೋ ರೂಮ್ ಮಾಲೀಕನ ಜೀವ ಉಳಿಸಿದ್ದೇ ಕೆಂಗೇರಿ ಠಾಣೆ ಪೇದೆ ಚಂದ್ರಶೇಖರ್. ಶೋ ರೂಮ್ ಮಾಲೀಕ ಶಫಿವುಲ್ಲಾ ಹಾಗೂ ಮಾಜಿ ಸೈನಿಕ ಜಗದೀಶ್ ಜಗಳ ಜೋರಾಗಿತ್ತು. ಇನ್ನೇನು ಪಿಸ್ತೂಲ್ ತೆಗೆದು ಜಗದೀಶ್ ಶಫಿವುಲ್ಲಾ ಕಡೆ ಹಾರಿಸಬೇಕು ಎನ್ನುವಷ್ಟರಲ್ಲಿ ಅಲ್ಲಿಗೆ ಆಗಮಿಸಿದ ಪೇದೆ ಪಿಸ್ತೂಲ್ ಡೌನ್ ಮಾಡಿದ್ದಾನೆ. 3.2 ಪಿಸ್ತೂಲಿನಿಂದ ಹಾರಿದ ಗುಂಡು ನೆಲಕ್ಕೆ ತಗುಲಿದೆ. ಶಫಿವುಲ್ಲಾ ಬಚಾವಾಗಿದ್ದಾರೆ. ನಡೆಯಬಹುದಾಗಿದ್ದ ಅನಾಹುತ ತಪ್ಪಿಸಿದ ಪೇದೆ ಚಂದ್ರಶೇಖರ್ ಕೆಲಸಕ್ಕೆ ಅವರಿಗೆ ಬಹಮಾನ ನೀಡಲಾಗಿದೆ. 
SCROLL FOR NEXT