ರಾಜ್ಯ

ರೈತರ ಸಾಲ ಮನ್ನಾಗೆ ರಾಷ್ಟ್ರೀಯ ನೀತಿ ಅಗತ್ಯವಿದೆ: ಪರಮೇಶ್ವರ್

Shilpa D
ಬೆಂಗಳೂರು: ಸಾಲಮನ್ನಾ ಮಾಡುವಂತೆ ರೈತರು ಒತ್ತಯಿಸಿ ಹಲವೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಸಾಲ ಮನ್ನಾದ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟ ನಿಲುವನ್ನು ಪ್ರಕಟಿಸುವಂತೆ  ಹಾಗೂ ರೈತರ ಸಾಲ ಮನ್ನಾಗೆ ರಾಷ್ಟ್ರೀಯ ನೀತಿ ರೂಪಿಸುವಂತೆ  ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಆಗ್ರಹಿಸಿದ್ದಾರೆ. 
ಸಿದ್ದರಾಮಯ್ಯ ಸರ್ಕಾರ ಕೋ- ಆಪರೇಟಿವ್ ಬ್ಯಾಂಕ್ ಗಳ ಸಾಲಮನ್ನಾ ಮಾಡಲು ಬದ್ಧವಾಗಿದೆ. ಆದರೆ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡಲಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರ ಸಹಕಾರ ಬ್ಯಾಂಕುಗಳ ರೈತರ ಸಾಲ ಮನ್ನಾ ಮಾಡಿದರೆ, ರಾಷ್ಟ್ರೀಕೃತ ಬ್ಯಾಂಕುಗಳ ರೈತರ ಸಾಲ ಉಳಿಯುತ್ತದೆ. ಇದರಿಂದ ಅಸಮಾನತೆ ಸೃಷ್ಟಿಯಾಗುತ್ತದೆ. ಹಾಗಾಗಿ, ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾವೂ ಅಗತ್ಯವಿದೆ ಎಂದು ಹೇಳಿದ್ದಾರೆ. 
ವಿವಿಐಪಿಗಳ ವಾಹನಗಳ ಕೆಂಪು ದೀಪಗಳನ್ನು ತೆಗೆಯಲು ರಾತ್ರೋರಾತ್ರಿ ರಾಷ್ಟ್ರೀಯ ತೀರ್ಮಾನವನ್ನು ಕೈಗೊಳ್ಳುವ ಕೇಂದ್ರ ಸರ್ಕಾರ ಸಾಲಮನ್ನಾದ ಬಗ್ಗೆ ರಾಷ್ಟ್ರೀಯ ನೀತಿಯನ್ನು ಕೈಗೊಳ್ಳಲು ಮೀನಾ-ಮೇಷ ಎಣಿಸುತ್ತಿರುವುದು ಸರಿಯಲ್ಲ. ಕೂಡಲೇ ಸಾಲಮನ್ನಾದ ಬಗ್ಗೆ ಒಂದು ಖಚಿತ ನಿಲುವನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದಾರೆ.
SCROLL FOR NEXT