ಬೆಂಗಳೂರು: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಬೆಂಗಳೂರಿಗೆ ಆಗಮಿಸಲಿದ್ದು, ರಾಜ್ಯದ ಕಾಂಗ್ರೆಸ್ ನಾಯಕರೊಂದಿಗೆ ಮುಂಬರುವ ವಿಧಾನಸಭೆ ಚುನಾವಣೆ ಸಂಬಂಧ ಚರ್ಚೆ ನಡೆಸಲಿದ್ದಾರೆ.
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಬಿಡುಗಡೆಗೆ ರಾಹುಲ್ ಆಗಮಿಸುತ್ತಿದ್ದಾರೆ. ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಜೊತೆ ಅಂಬೇಡ್ಕರ್ ಭವನದಲ್ಲಿ ಪತ್ರಿಕೆ ಬಿಡುಗಡೆ ಗೊಳಿಸಲಿದ್ದಾರೆ.
ನಂತರ ಮಧ್ಯಾಹ್ನ, ಜ್ಞಾನಜ್ಯೋತಿ ಸಭಾಂಗಣದಲ್ಲಿ ಕೆಪಿಸಿಸಿ ಜನರಲ್ ಬಾಡಿ ಮೀಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ,ಸಿ ವೇಣುಗೋಪಾಲ್, ಹಾಗೂ ಜಿ. ಪರಮೇಶ್ವರ್ ಮತ್ತು ದಿನೇಶ್ ಗುಂಡೂರಾವ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ತಂತ್ರಗಳ ಬಗ್ಗೆ ಚರ್ಚೆ ನಡೆಸಲಾಗುವುದು. ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆಗೆ ಕೇವಲ ಹತ್ತು ತಿಂಗಳು ಬಾಕಿ ಇರುವುದರಿಂದ ಕರ್ನಾಟಕದಲ್ಲಿ ನಡೆಯುವ ಚುನಾವಣೆ ಕಾಂಗ್ರೆಸ್‌ಗೆ ಮಹತ್ವದ್ದಾಗಿದ್ದು, ಇದನ್ನು ಶತಾಯಗತಾಯ ಗೆಲ್ಲಲು ಬೇಕಿರುವ ಅಗತ್ಯ ಪೂರ್ವ ಸಿದ್ದತೆಯನ್ನು ಈಗಿನಿಂದಲೇ ಮಾಡುವಂತೆ ಪಕ್ಷದ ರಾಜ್ಯ ನಾಯಕರಿಗೆ ರಾಹುಲ್ ಗಾಂಧಿ ಸೂಚನೆ ನೀಡುವ ಸಾಧ್ಯತೆ ಇದೆ.
ಅಲ್ಲದೇ ಇತ್ತೀಚೆಗೆ ಪಕ್ಷದ ಪಮುಖ ಹುದ್ದೆಗಳಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದರಿಂದ ಕೆಲವು ನಾಯಕರು ಅಸಮಾಧಾನಗೊಂಡಿರುವುದು ಪಕ್ಷದಲ್ಲಿ ಇನ್ನೂ ಆಂತರಿಕ ಬೇಗುದಿ ತುಂಬಿರುವುದು ಎದ್ದು ಕಾಣುತ್ತದೆ. ಅದೆಲ್ಲವನ್ನು ಸರಿಪಡಿಸಿಕೊಂಡು ಚುನಾವಣೆ ಗೆಲ್ಲಲು ಎಲ್ಲರೂ ಒಗ್ಗಟ್ಟಿನ ಮಂತ್ರ ಜಪಿಸುವಂತೆ ರಾಹುಲ್ ಗಾಂಧಿ ಎಲ್ಲ ನಾಯಕರಿಗೂ ತಾಕೀತು ಮಾಡುವ ಸಾಧ್ಯತೆ ಇದೆ.
ಲೇಖಕರು, ಬರಹಗಾರರು, ಕಲಾವಿದರು ಸಾಮಾಜಿಕ ಚಿಂತಕರ ಜೊತೆ ರಾಹುಲ್ ಗಾಂಧಿ ಸಮಾಲೋಚನೆ ನಡೆಸಲಿದ್ದಾರೆ ಎಂದು ಪರಮೇಶ್ವರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics