ರಾಜ್ಯ

ಸಾಮವ್ವ ದೇವತೆ ಮೈಮೇಲೆ ಬಂದು ದೇವದಾಸಿಯರನ್ನಾಗಿ ಮಾಡುವಂತೆ ಕೇಳುತ್ತದೆ: ಪೂಜಾರಿ

Shilpa D
ಕಲಬುರಗಿ: ಬಲವಂತವಾಗಿ ದೇವದಾಸಿ ಪದ್ಧತಿಗೆ ಒಳಪಡುತ್ತಿದ್ದ  11 ವರ್ಷದ ಬಾಲಕಿಯನ್ನು ರಕ್ಷಣೆ ಮಾಡುವಲ್ಲಿ ಸ್ಥಳೀಯ ಆಡಳಿತ ಮತ್ತು ಸ್ವಯಂ ಸೇವಾ ಸಂಘಟನೆಗಳು ಯಶಸ್ವಿಯಾಗಿವೆ.
ದೇವದಾಸಿ ಪದ್ಧತಿ ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಿರ್ಮೂಲನವಾಗಿದೆ ಎಂದು ಕಲಬುರಗಿ ಜಿಲ್ಲಾಡಳಿತ ಘೋಷಿಸಿತ್ತು. ಬಾಲಕಿಯನ್ನು ಚಿಕ್ಕ ವಯಸ್ಸಿನಲ್ಲಿಯೇ ದೇವದಾಸಿ ಪದ್ಧತಿಗೆ ಒಳಪಡಿಸಿದರೇ  ಆಕೆ ಬೆಳೆದು ದೊಡ್ಡವಳಾದ ಮೇಲೆ ಆಕೆಯನ್ನು ಬೇರೆ ಪುರುಷನ ಜೊತೆ ಕಳುಹಿಸುವುದಾಗಿದೆ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಇಲಾಖೆ ಸದಸ್ಯರು ತಿಳಿಸಿದ್ದಾರೆ.
ಬೆಡ್ಸೂರು ಗ್ರಾಮದ ಬಾಲಕಿ ಕಮಲವ್ವ( ಹೆಸರು ಬದಲಾಯಿಸಲಾಗಿದೆ) ಳನ್ನು ಒಬ್ಬ ವ್ಯಕ್ತಿಯ ಜೊತೆ ಕಳುಹಿಸಲು ಸಿದ್ಧತೆ ನಡೆಸುತ್ತಿದ್ದ ವೇಳೆ ತಂಡ ಆಕೆಯನ್ನು ರಕ್ಷಿಸಿದೆ. ಗ್ರಾಮದ ಸಾಮವ್ವ ದೇವಾಲಯದಲ್ಲಿ ಇಂದಿಗೂ ಇಂತ ಪದ್ಧತಿ ರೂಢಿಯಲ್ಲಿದೆ.
ಕಳೆದ 40 ವರ್ಷಗಳಿಂದ ದೇವದಾಸಿ ಪದ್ಧತಿಯನ್ನು ನಡೆಸಿಕೊಂಡು ಬರುತ್ತಿರುವ ದೇವಾಲಯದ ಪೂಜಾರಿ ಶರಣಪ್ಪ(70) ನನ್ನು ರಕ್ಷಮಾ ತಂಡ ವಿಚಾರಣೆ ನಡೆಸಿದೆ. 
ಪ್ರತಿ ಮಂಗಳವಾರ ಮತ್ತು ಶುಕ್ರವಾರ ಸಾಮವ್ವ ದೇವತೆ ತನ್ನ ಮೈಮೇಲೆ ಬರುತ್ತದೆ. ಆ ವೇಳೆ ಪೋಷಕರಿಗೆ ತಮ್ಮ ಮಕ್ಕಳನ್ನು ದೇವದಾಸಿರನ್ನಾಗಿ ಮಾಡುವಂತೆ ದೇವರು ನನ್ನ ಮೂಲಕ ಸಂದೇಶ ನೀಡುತ್ತದೆ. ನಾನು ದೇವರ ಸಂದೇಶವನ್ನು ರವಾನಿಸುತ್ತೇನೆ ಎಂದು ಆತ ಹೇಳಿದ್ದಾನೆ.
ಕಳೆದ 40 ವರ್ಷಗಳಿಂದ ರತ್ಕಳ್, ಬೆಡ್ಸೂರ್, ಕಂದಗೋಳ್ ಕಲಗಿ ಸೇರಿದಂತೆ ಹಲವು ಗ್ರಾಮಗಳ  ಬಾಲಕಿಯರು ದೇವದಾಸಿ ದೀಕ್ಷೆ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಐದು ವರ್ಷದ ಹಿಂದೆ ಕಮಲವ್ವ ದೇವದಾಸಿ ದೀಕ್ಷೆ ತೆಗೆದುಕೊಂಡಿದ್ದಳು. ಈಗ ಆಕೆ 5ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಗುರುವಾರ ಕಮಲವ್ವ ಪೋಷಕರನ್ನು ಹಾಗೂ ಪೂಜಾರಿಯನ್ನು ರಕ್ಷಣಾ ತಂಡ ಪೊಲೀಸ್ ಠಾಣೆಗೆ ಕರೆದೊಯ್ದಿದೆ, ಕಮಲವ್ವಳನ್ನು ರಾಜ್ಯ ಮಹಿಳಾ ನಿಲಯಕ್ಕೆ ಕಳುಹಿಸಲಾಗಿದೆ. 
SCROLL FOR NEXT