ಬಾಗಲಕೋಟೆ: ಕರ್ನಾಟಕದ ಬಾಗಲಕೋಟೆ ಮೂಲದ 26 ವರ್ಷದ ಇಂಜಿನಿಯರ್ ಮಂಜುನಾಥ್ ಅವರು ಕಳೆದ ಭಾನುವಾರದಿಂದ ಜರ್ಮನಿಯ ಹ್ಯಾಂಬರ್ಗ್ ನಲ್ಲಿ ನಾಪತ್ತೆಯಾಗಿದ್ದು, ಆತಂಕದಲ್ಲಿರುವ ಆತನ ಕುಟುಂಬ ಪತ್ತೆಗಾಗಿ ಸಹಕಾರ ನೀಡುವಂತೆ ವಿದೇಶಾಂಗ ಸಚಿವಾಲಯಕ್ಕೆ ಗುರುವಾರ ಮನವಿ ಮಾಡಿದೆ.
ಕಳೆದ ಮೂರು ದಿನಗಳಿಂದ ಮಂಜುನಾಥ್ ನಾಪತ್ತೆಯಾಗಿದ್ದು, ಹ್ಯಾಂಬರ್ಗ್ ನದಿ ದಡದಲ್ಲಿ ಆತನ ವಸ್ತುಗಳ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಜುನಾಥ್ ಬಳಸುತ್ತಿದ್ದ ಸೈಕಲ್, ಇತರೆ ವಸ್ತುಗಳು ಸೇರಿದಂತೆ ಪತ್ರವೊಂದು ಪತ್ತೆಯಾಗಿದ್ದು, ಪತ್ರದ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
26 ವರ್ಷದ ಮಂಜುನಾಥ್ ಸಿದ್ದಣ್ಣ ಚುರಿ ಎಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದು, ಮೂಲತಃ ಬಾಗಲಕೋಟೆ ಜಿಲ್ಲೆಯ ಸಿಮಿಕೇರಿ ಗ್ರಾಮದವರಾಗಿದ್ದಾರೆ.
ಮಂಜುನಾಥ್ ಬಸವೇಶ್ವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಮುಗಿಸಿದ್ದರು. ಬಳಿಕ ಮಾಸ್ಟರ್ ಸಾಫ್ಟ್ ವೇರ್ ಉನ್ನತ ವ್ಯಾಸಂಗಕ್ಕಾಗಿ 2 ವರ್ಷಗಳ ಹಿಂದೆ ಜರ್ಮನಿಯ ಹ್ಯಾಂಬರ್ಗ್ ಗೆ ತೆರಳಿದ್ದರು. ಇದೇ ಸೆಪ್ಚೆಂಬರ್ ನಲ್ಲಿ ಊರಿಗೆ ಬರುವುದಾಗಿ ಮಂಜುನಾಥ್ ತಿಳಿಸಿದ್ದರು. ಆದರೆ ಇದೀಗ ಮಂಜುನಾಥ್ ನಾಪತ್ತೆಯಾಗಿದ್ದು, ಈ ಸಂಬಂಧ ಮಂಜುನಾಥ್ ಜೊತೆ ವಾಸಿಸುತ್ತಿದ್ದ ಆತನ ಸ್ನೇಹಿತ ಅನಿಲ್ ದೇಶಪಾಂಡೆ ಅವರು ಹ್ಯಾಂಬರ್ಗ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ಮಂಜುನಾಥ್ ನಾಪತ್ತೆ ಕುರಿತು ಬಾಗಲಕೋಟೆಯಲ್ಲಿರುವ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.
ಆತಂಕಗೊಂಡ ಮಂಜುನಾಥ್ ಕುಂಟುಂಬ ಬಾಗಲಕೋಟೆ ಸಂಸದ ಪಿಸಿ ಗದ್ದಿಗೌಡರ್ ಅವರನ್ನು ಭೇಟಿ ಮಾಡಿ, ವಿದೇಶಾಂಗ ಸಚಿವಾಲಯದ ನೆರವು ಕೋರಿದ್ದಾರೆ.
ಈ ಬಗ್ಗೆ ತನಿಖೆ ನಡೆಸುತ್ತಿದ್ದ ಜರ್ಮನ್ ಪೊಲೀಸರಿಗೆ ಮಂಜುನಾಥ್ ರೂಮಿನಲ್ಲಿ ಪತ್ರವೊಂದು ದೊರೆತಿದ್ದು, ಇದು ಭಾರತೀಯ ಭಾಷೆಯಲ್ಲಿದ್ದರಿಂದ ಅದನ್ನು ಓದಲು ಸಾಧ್ಯವಾಗದೇ ಭಾರತಿಯ ರಾಯಭಾರ ಕಚೇರಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಇದೀಗ ಪತ್ರವನ್ನು ಸ್ವೀಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ನಾಪತ್ತೆಯಾಗಿರುವ ಮಂಜುನಾಥ್ ಪತ್ತೆಯಾಗಿ ಕುಟುಂಬಸ್ಥರು ಕೇಂದ್ರ ಸರ್ಕಾರದ ಮೊರೆ ಹೋಗಿದ್ದು, ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿದ್ದಾರೆ.