ರಾಜ್ಯ

ಒಂದು ಮರ ಉಳಿಸಲು ಬೇಸಿಗೆ ರಜೆಯನ್ನು ಮೀಸಲಿರಿಸಿದ ಸಹೋದರರು!

Srinivas Rao BV
ಬೆಂಗಳೂರು: ನಗರದಲ್ಲಿ ಎಗ್ಗಿಲ್ಲದೇ ಮರಗಳ ಮಾರಣ ಹೋಮ ನಡೆಯುತ್ತಿರುವಾಗ, ಪಾರ್ಥ್ ಹಾಗೂ ಅರ್ಜುನ್ ಚೌಧರಿ ಸಹೋದರರು ತಮ್ಮ ಬೇಸಿಗೆ ರಜೆಯನ್ನು ಕೇವಲ ಒಂದು ಮರ ಉಳಿಸುವುದಕ್ಕೆ ವ್ಯಯಿಸಿ ಮಾದರಿಯಾಗಿದ್ದಾರೆ. 
ನಾವು ಮಾತ್ರ ಜೀವಿತಾವಧಿಯನ್ನು ಪೂರ್ಣಗೊಳಿಸಬೇಕು ಎಂದುಕೊಳ್ಳುತ್ತೇವೆ ಹಾಗಾದರೆ ಮರಗಳೇಕೆ ಜೀವಿತಾವಧಿಯನ್ನು ಪೂರ್ಣಗೊಳಿಸಬಾರದು ಎಂದು ಪ್ರಶ್ನಿಸುವ ಈ ಯುವ ಸಹೋದರರು,  ಫಿಕಸ್ ರೆಸೆಮೊಸಾ ಎಂಬ ಬೃಹತ್ ಮರವನ್ನು ರಕ್ಷಿಸಿದ್ದಾರೆ. 
ಬೆಳ್ಳಂದೂರು ಕೆರೆಯ ಬಳಿ ಇರುವ ಬೃಹತ್ ಮರ ಸ್ಥಳೀಯ ಅಪಾರ್ಟ್ ಮೆಂಟ್, ಕಾಂಪ್ಲೆಕ್ಸ್ ಗಳಿಗೆ ಸಮಸ್ಯೆಯಾಗಿತ್ತು. 7-8 ವರ್ಷದ ಈ ಮರದ ಬೇರುಗಳು 225 ಮನೆಗಳನ್ನು ಹೊಂದಿರುವ ಯುಫೋರಿಯಾ ಸಂಕೀರ್ಣದ(ಕಾಂಪ್ಲೆಕ್ಸ್) ಒಳಚರಂಡಿ ವ್ಯವಸ್ಥೆಗೆ ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಪಾರ್ಟ್ ಮೆಂಟ್ ನ್ನು ನಿರ್ವಹಣೆ ಮಾಡುವವರು ಮರವನ್ನು ಕತ್ತರಿಸಲು ನಿರ್ಧರಿಸಿದರು. ಆದರೆ ಈ ಮರ ಹಲವು ಪಕ್ಷಿಗಳಿಗೆ ಆಶ್ರಯ ತಾಣವಾಗಿದ್ದರಿಂದ ಪಾರ್ಥ್ ಹಾಗೂ ಅರ್ಜುನ್ ಚೌಧರಿ ಸಹೋದರರು ಮರ ಕಡಿಯುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಮರ ಇದ್ದ ಜಾಗದಲ್ಲಿ ನಾಲ್ಕು ಸಸಿಗಳನ್ನು ನೆಡುವುದಾಗಿ ಹೇಳಿದರೂ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. 
ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಚೌಧರಿ ಸಹೋದರರ ಪೋಷಕರು ವಿಜಯ್ ನಿಶಾಂತ್ ಎಂಬ ವೈದ್ಯರನ್ನು ಸಂಪರ್ಕಿಸಿ ಬೇರುಗಳಿಂದ ಕಟ್ಟಡಕ್ಕೆ ಹಾನಿಯುಂಟಾಗದಂತೆ ಹಾಗೂ ಮರ ಉಳಿದುಕೊಳ್ಳುವಂತಹ ಪರಿಹಾರ ಸೂಚಿಸಲು ಕೇಳಿದರು. ಕೊನೆಗೂ ಬೇರುಗಳು ಬೆಳೆಯದಂತೆ ತಡೆಗಟ್ಟುವ ವ್ಯವಸ್ಥೆಯ ಪರಿಹಾರ ದೊರೆಯಿತು. ಈ ವ್ಯವಸ್ಥೆಯನ್ನು ಅಳವಡಿಸಲು ಅಗತ್ಯವಿದ್ದ ಹಣವನ್ನು ಮನೆಮನೆಗೆ ತೆರಳಿ ಅಭಿಯಾನದ ಮೂಲಕ ಸಂಗ್ರಹಿಸಿದ ಪಾರ್ಥ್ ಹಾಗೂ ಅರ್ಜುನ್ ಚೌಧರಿ ಸಹೋದರರು ಸ್ವತಃ ಪಾಕೆಟ್ ಮನಿಯಿಂದ 2,000 ರೂ ಹಣ ನೀಡಿ ಒಟ್ಟು 7,040 ರು ಹಣ ಸಂಗ್ರಹಿಸಿ ರೂಟ್ ಬ್ಯಾರಿಯರ್ ವ್ಯವಸ್ಥೆಯನ್ನು ಅಳವಡಿಸಿದ್ದಾರೆ. ಇಬ್ಬರು ಸಹೋದರರ ಈ ಕೆಲಸಕ್ಕೆ ಅಪಾರ್ಟ್ ಮೆಂಟ್ ನ ನಿವಾಸಿಗಳೂ ಕೈ ಜೋಡಿಸಿದ್ದು, ಒಟ್ಟು 25,000 ರೂಪಾಯಿ ವೆಚ್ಚದಲ್ಲಿ ರೂಟ್ ಬ್ಯಾರಿಯರ್ ವ್ಯವಸ್ಥೆಯನ್ನು ಅಳವಡಿಸುವ ಯೋಜನೆಗೆ ಸಹಕರಿಸಿದ್ದಾರೆ. 
SCROLL FOR NEXT