ಬೆಂಗಳೂರು: ನಗರದ ಹೆಚ್ ಎಎಲ್ ಪ್ರದೇಶದಲ್ಲಿ ಪೊಲೀಸರ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದ ಅಪರಾಧ ಚಾಳಿಕೋರನ ಮೇಲೆ ಇಂದು ಪೊಲೀಸರು ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದೆ.
ಸರ ಕದ್ದು ಓಡಿ ಹೋಗುವುದನ್ನು ಹಿಡಿಯಲೆತ್ನಿಸಿದ ವ್ಯಕ್ತಿಯನ್ನು ಸಾಯಿಸಲು ಈತ ಪ್ರಯತ್ನಿಸುತ್ತಿದ್ದ ವೇಳೆ ಬಂಧಿತನಾಗಿದ್ದ.
ಹೆಚ್ ಎಎಲ್ ನ ವಿಭೂತಿಪುರದ ನಿವಾಸಿ ಜಾನ್ಸನ್ ನನ್ನು ಪೊಲೀಸರು ನಿನ್ನೆ ಸರ ಕದ್ದು ಓಡಿಹೋಗುವಾಗ ದಾರಿಹೋಕ ಸಾಯಿ ಚರಣ್ ಎಂಬುವವರು ಆತನನ್ನು ತಡೆಯಲು ಯತ್ನಿಸಿದಾಗ ಜಾನ್ಸನ್ ಅವರ ಮೇಲೆ ದಾಳಿ ನಡೆಸಿದ್ದ.ತೀವ್ರ ಗಾಯಗೊಂಡಿದ್ದ ಚರಣ್ ಮೃತಪಟ್ಟಿದ್ದಾರೆ.
ಇಂದು ಜಾನ್ಸನ್ ನನ್ನು ಅಪರಾಧ ನಡೆದ ಸ್ಥಳಕ್ಕೆ ಪೊಲೀಸರು ಪ್ರಾಥಮಿಕ ಮಾಹಿತಿ ಪಡೆಯಲು ಮತ್ತು ಸಾಕ್ಷಿಗಳನ್ನು ಸಂಗ್ರಹಿಸಲು ಕರೆದುಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಮೂತ್ರ ಬರುತ್ತದೆಂದು ನಟಿಸಿ ಆಚೆ ಹೋಗಲು ಪೊಲೀಸರ ಬಳಿ ಮನವಿ ಮಾಡಿದ. ಆತನನ್ನು ಬಿಡುಗಡೆ ಮಾಡಿದಾಗ ಕಾನ್ಸ್ಟೇಬಲ್ ಕಾಂತಾ ಅವರ ಮೇಲೆ ದಾಳಿ ಮಾಡಿದ. ಮತ್ತೊಬ್ಬ ಕಾನ್ಸ್ಟೇಬಲ್ ಮಂಜೇಶ್ ಮಧ್ಯ ಪ್ರವೇಶಿಸಲು ಯತ್ನಿಸಿದಾಗ ಅವರ ಮೇಲೆ ಕೂಡ ಜಾನ್ಸನ್ ದಾಳಿ ಮಾಡಿದ. ಆತನಿಗೆ ಶರಣಾಗುವಂತೆ ಮನವಿ ಮಾಡಿದರೂ ಕೇಳಲಿಲ್ಲ. ಆಗ ಪರಿಸ್ಥಿತಿಯ ಅಪಾಯ ಅರಿತು ಇನ್ಸ್ಪೆಕ್ಟರ್ ಸಾದಿಕ್ ಪಾಶಾ ಜಾನ್ಸನ್ ನ ಕಾಲಿಗೆ ಗುಂಡು ಹಾಕಿದರು. ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ತಿಳಿಸಿದ್ದಾರೆ.