ಬೆಂಗಳೂರು: 2014 ನೇ ಇಸವಿಯಲ್ಲಿ ಸುಮಾರು 2,752 ಆಯುಷ್ ಮೆಡಿಕಲ್ ಅಧಿಕಾರಿಗಳು ಹಾಗೂ ವೈದ್ಯರು ಹುಬ್ಬಳ್ಳಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ತರಬೇತಿ ಪಡೆದ 2,752 ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಎಲ್ಲಿ ಹೋದರು ಎಂಬ ಬಗ್ಗೆ ಮಾತ್ರ ಸುಳಿವೇ ಇಲ್ಲ.
ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ನೇಮಕ ಮಾಡಲು ಆರೋಗ್ಯ ಇಲಾಖೆ ಹೆಣಗಾಡುತ್ತಿದೆ. ಜೊತೆಗೆ ರಾಷ್ಟ್ರೀಯ ಆರೋಗ್ಯ ಮಿಷನ್ ಅನುದಾನದ ಹಣವನ್ನು ಈ ಕಾಣದ ಸಿಬ್ಬಂದಿಗೋಸ್ಕರ ಬಳಕೆ ಮಾಡಲಾಗುತ್ತಿದ ಎಂಬ ಮಾಹಿತಿ ಕಳೆದ ವರ್ಷ ಏಪ್ರಿಲ್ ನಲ್ಲಿ ತಯಾರಿಸಿದ ವಿಶೇಷ ಆಡಿಟ್ ವರದಿಯಿಂದಾಗಿ ಬಹಿರಂಗವಾಗಿದೆ. 4.31 ಕೋಟಿ ರೂಪಾಯಿ ನಷ್ಟವಾಗಿದ್ದರೂ, ಇಲಾಖೆಯು ವಾಪಸ್ ಪಡೆಯಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ.
ಹುಬ್ಬಳ್ಳಿ ಪ್ರಾಥಮಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೇಂದ್ರದ ಮಾಹಿತಿ ಪ್ರಕಾರ, 554 ವೈದ್ಯರು, 2,122 ಸ್ಟ್ಯಾಫ್ ನರ್ಸ್, ಮತ್ತು 76 ಆಯುಷ್ ಮೆಡಿಕಲ್ ಅಧಿಕಾರಿಗಳು ಈ ಕೇಂದ್ರದಲ್ಲಿ ತರಬೇತಿ ಪಡೆದುಕೊಂಡಿದ್ದಾರೆ, ಇದಕ್ಕಾಗಿ ತಗುಲಿದ ಖರ್ಚನ್ನು ನಮೂದಿಸಿದ್ದಾರೆ, ಆದರೆ ತರಬೇತಿ ಪಡೆದವರ ಹಾಜರಾತಿ ಮಾತ್ರ ಎಲ್ಲೂ ನಮೂದಾಗಿಲ್ಲ ಎಂಬುದು ಆಡಿಟ್ ತಂಡ ಕ್ರಾಸ್ ಚೆಕ್ ಮಾಡಿದಾಗ ತಿಳಿದು ಬಂದಿದೆ.
ಮೈಸೂರು, ಬೆಂಗಳೂರು, ಕಲಬುರಗಿ ಮತ್ತು ಹುಬ್ಬಳ್ಳಿ ಸೇರಿದಂತೆ ರಾಜ್ಯದಲ್ಲಿ ಒಟ್ಟು ನಾಲ್ಕು ತರಬೇತಿ ಕೇಂದ್ರಗಳಿವೆ, ಇತರ ಜಿಲ್ಲೆಗಳಲ್ಲಿರುವ ತರಬೇತಿ ಕೇಂದ್ರಗಳಿಗೆ ಹೋಲಿಸಿದರೇ ಹುಬ್ಬಳ್ಳಿಗೆ 10 ಪಟ್ಟು ಹೆಚ್ಚು ಹಣ ಬಿಡುಗಡೆ ಮಾಡಲಾಗಿದೆ. ಇದು ಬೆಂಗಳೂರಿನ ಪ್ರಧಾನ ಕಚೇರಿಯ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.
ರಾಷ್ಚ್ರೀಯ ಆರೋಗ್ಯ ಮಿಷನ್ 4 ತರಬೇತಿ ಕೇಂದ್ರಗಳಿಗಾಗಿ ಬಜೆಟ್ ನಲ್ಲಿ ಒಟ್ಟು 20.98 ಕೋಟಿ ಹಣ ಮೀಸಲಿಡಲಾಗಿತ್ತು. 4. 95 ಕೋಟಿ ರು ಹಣವನ್ನು ಹುಬ್ಬಳ್ಳಿಗೆ ನೀಡಲಾಗಿತ್ತು.
ಹುಬ್ಬಳ್ಳಿ ಪ್ರಾಥಮಿಕ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ. ಮನೋಲಿ ಹಾಗೂ ಎಸಿ ಐ ಎಚ್ ಎಫ್ ಡಬ್ಲ್ಯೂ ನಿರ್ದೇಶಕ ಡಾ.ಅರುಣಾ, ನಿವೃತ್ತಿ ಹೊಂದಿದ್ದಾರೆ. ಹೀಗಾಗಿ ಹಣಕಾಸು ಅವ್ಯವಹಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಶಿಫಾರಸು ಮಾಡಿರುವ ತಂಡ ಯಾರೋಬ್ಬರ ಹೆಸರನ್ನು ಉಲ್ಲೇಖಿಸಿಲ್ಲ.
2014 -15 ರ ದಾಖಲೆಗಳ ನಿರ್ವಹಣೆ ಮಾಡದ ಸಂಬಂಧಕ್ರಮಕ್ಕೆ ಸೂಚಿಸಲಾಗಿದೆ. ಹಣ ದುರ್ಬಳಕೆ ಮಾಡಿರುವ ಸಿಬ್ಬಂದಿಯಿಂದ ಹಣ ವಸೂಲಿ ಮಾಡಲಾಗುವುದು ಎಂದು ರಾಜ್ಯ ರಾಷ್ಟ್ರೀಯ ಆರೋಗ್ಯ ಮಿಷನ್ ನ ಸಿಎಫ್ ಒ ಮಂಜುನಾಥ ಸ್ವಾಮಿ ಹೇಳಿದ್ದಾರೆ. ಒಂದು ವೇಳೆ ಹಣ ನೀಡದಿದ್ದರೇ ಸಿಬ್ಬಂದಿಯ ಪಿಎಫ್, ಗ್ರಾಚ್ಯುಟಿ ,ಸಂಬಳ ಸಹಿತ ಎಲ್ಲಾ ಸೌಲಭ್ಯಗಳನ್ನು ತಡೆಹಿಡಿಯಲಾಗುವುದು ಜೊತೆಗೆ ಆಸ್ತಿಯ ಮೇಲೂ ದಾವೆ ಹೂಡುವುದಾಗಿ ತಿಳಿಸಿದ್ದಾರೆ
ಈ ಸಂಬಂಧ ನನಗೆ ಇದುವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ, ಪ್ರಕರಣ ಸಂಬಂಧ ಕೂಡಲೇ ಕಡತಗಳನ್ನು ತರಿಸಿ ಪರಿಶೀಲಿಸುವುದಾಗಿ ಆರೋಗ್ಯ ಇಲಾಖೆ ಆಯುಕ್ತ ಸುಭೋಧ್ ಯಾದವ್ ಹೇಳಿದ್ದಾರೆ. ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಪ್ರಕರಣ ಸಂಬಂಧ ವಿಚಾರಣೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.