ರವಿ ಬೆಳಗೆರೆ ಮತ್ತು ಕೆ.ಬಿ ಕೋಳಿವಾಡ
ಬೆಂಗಳೂರು: ಶಾಸಕರ ವಿರುದ್ಧ ತೇಜೋವಧೆ ಮಾಡುವಂತ ಲೇಖನಗಳನ್ನು ಪ್ರಕಟಿಸಿದ್ದ ಹಾಯ್ ಬೆಂಗಳೂರು ಸಂಪಾದಕ ಮತ್ತು ವಾಯ್ಸ್ ಆಫ್ ಯಲಹಂಕ ಪತ್ರಿಕೆ ಸಂಪಾದಕ ಅನಿಲ್ ರಾಜ್ ಅವರಿಗೆ ಬಂಧನ ಶಿಕ್ಷೆ ವಿಧಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಇಲಾಖೆ ವಿಧಾನಸಭೆ ಕಾರ್ಯದರ್ಶಿಗೆ ವರದಿ ಸಲ್ಲಿಸಿದೆ.
ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಸುಭಾಷ್‌ಚಂದ್ರ , ಡಿಜಿ-ಐಜಿಪಿ ಆರ್ ದತ್ತ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿ ಅವರನ್ನು ಭೇಟಿ ಮಾಡಿ, ಇಬ್ಬರು ಪತ್ರಕರ್ತರ ಬಂಧನಕ್ಕೆ ನಡೆಸಿದ ಪ್ರಯತ್ನಗಳ ಬಗ್ಗೆ ವಿವರ ನೀಡಿದ್ದಾರೆ.
ಬುಧವಾರ ಮಧ್ಯಾಹ್ನ ಮೂರು ಗಂಟೆಗೆ ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿ ಅವರನ್ನು ಭೇಟಿ ಮಾಡಿದ ಸುಭಾಷ್‌ಚಂದ್ರ ತಮ್ಮ ವರದಿ ಸಲ್ಲಿಸಿ, ಅಧ್ಯಕ್ಷರಿಗೆ ತಲುಪಿಸುವಂತೆ ಹೇಳಿದರು. ಶಾಸಕರ ವಿರುದ್ಧ ತೇಜೋವಧೆ ಮಾಡು ವ ಸುದ್ದಿ ಪ್ರಕಟಿಸಿದ ಆರೋಪದಲ್ಲಿ ‘ಹಾಯ್ ಬೆಂಗಳೂರು’ ಪತ್ರಿಕೆ ಸಂಪಾದಕ ರವಿ ಬೆಳಗೆರೆ ಮತ್ತು ‘ಯಲಹಂಕ ವಾಯ್ಸ್’ ಪತ್ರಿಕೆ ಸಂಪಾದಕ ಅನಿಲ್ ರಾಜ್ ಅವರಿಗೆ ಹಕ್ಕು ಬಾಧ್ಯತಾ ಸಮಿತಿ ಒಂದು ವರ್ಷ ಜೈಲು ಮತ್ತು ರು 10 ಸಾವಿರ ದಂಡ ವಿಧಿಸುವಂತೆ ಶಿಫಾರಸು ಮಾಡಿತ್ತು. ಅದನ್ನು ಸದನ ಒಪ್ಪಿಕೊಂಡಿದೆ.
ಶಿಕ್ಷೆ ಜಾರಿಯಾಗದ ಕುರಿತು ಗೃಹ ಇಲಾಖೆಯಿಂದ ವರದಿ ಪಡೆಯುವಂತೆ ಸಭಾಧ್ಯಕ್ಷ ಕೋಳಿವಾಡ ನೀಡಿರುವ ಸೂಚನೆ ಅನ್ವಯ ಸುಭಾಷ್ ಚಂದ್ರ ಅವರಿಗೆ ಮೂರ್ತಿ ಬರೆದಿದ್ದರು.
ಗೃಹ ಇಲಾಖೆ ಸಲ್ಲಿಸಿರುವ ವರದಿಯಲ್ಲಿ ಏನಿದೆ ಎಂಬ ಮಾಹಿತಿ ಬಹಿರಂಗ ಪಡಿಸಲು ಮೂರ್ತಿ ನಿರಾಕರಿಸಿದ್ದಾರೆ. ಸ್ಪೀಕರ್ ಕೋಳಿವಾಡ ಅವರಿಗೆ ವರದಿಯನ್ನು ನೀಡಲಾಗುವುದು, ಆ ನಂತರ ಸ್ಪೀಕರ್ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.