ಬೆಂಗಳೂರು: ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕಾಗಿ ಚಿಕ್ಕಬಳ್ಳಾಪುರಕ್ಕೆ ಮಾಜಿ ಪ್ರಧಾನಿ ದೇವೇಗೌಡರು ತೆರಳುವ ವೇಳೆ ಆ್ಯಂಬುಲೆನ್ಸ್ ನಿಲ್ಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಆ್ಯಂಬುಲೆನ್ಸ್ ನಿಂತಿದ್ದು ಗಮನಕ್ಕೆ ಬರಲಿಲ್ಲ ಎಂದು ಹೇಳಿದ್ದಾರೆ.
ದೇವೇಗೌಡರು ತೆರಳುತ್ತಿದ್ದ ಮಾರ್ಗದಲ್ಲಿ ಆ್ಯಂಬುಲೆನ್ಸ್ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಆಸ್ಪತ್ರೆಗೆ ನವಜಾತ ಶಿಶು ಮತ್ತು ಬಾಣಂತಿಯನ್ನು ಕರೆದೊಯ್ಯಲಾಗುತ್ತಿತ್ತು.
ಈ ಸಂಬಂಧ ಸುದ್ದಿಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿರುವ ದೇವೇಗೌಡರು ಅಲ್ಲಿ ಆ್ಯಂಬುಲೆನ್ಸ್ ನಿಂತಿದ್ದು ನಮ್ಮ ಗಮನಕ್ಕೆ ಬರಲಿಲ್ಲ, ಆದರೆ ಮಗುವಿಗೆ ಯಾವುದೇ ತೊಂದರೆಯಾಗಿಲ್ಲ, ಅನಾವಶ್ಯಕವಾಗಿ ನನ್ನನ್ನು ಎಳೆದು ತರಲಾಗುತ್ತಿದೆ ಎಂದು ಹೇಳಿದ್ದಾರೆ.
ನಾನೊಬ್ಬ ಸಣ್ಣ ರಾಜಕಾರಣಿ, ನಾನು ಯಾವುದೇ ಸವಲತ್ತುಗಳನ್ನು ಹೊಂದಿಲ್ಲ ಎಂದು ಅವರು ಹೇಳಿದ್ದಾರೆ.ಇನ್ನು ಇದೇ ವೇಳೆ ಮಾತನಾಡಿರುವ ಚಿಕ್ಕಬಳ್ಳಾಪುರ ಎಸ್ ಪಿ. ಕಾರ್ತಿಕ್ ರೆಡ್ಡಿ, ದೇವೇಗೌಡರು ವಾಹನ ತೆರಳಲು ಅನುಕೂಲ ಕಲ್ಪಿಸುವಂತೆ ಹೇಳಿದರು. ನಾವು ಮಾಜಿ ಪಿಎಂ ಅವರನ್ನು ಅಭಿನಂದಿಸಬೇಕು. ಕೆಲವೇ ಕ್ಷಣಗಳಲ್ಲಿ ಈ ಘಟನೆ ಸಂಭವಿಸಿತ್ತು. ಕೆಲವೇ ನಿಮಿಷಗಳಲ್ಲಿ ಎಲ್ಲಾ ವಾಹನ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಯಿತು ಎಂದು ಹೇಳಿದ್ದಾರೆ.