ರಾಜ್ಯ

ಸಿಎಂ ಸಿದ್ದರಾಮಯ್ಯ ಹೆಸರಲ್ಲಿ ನಕಲಿ ಟ್ಟಿಟ್ಟರ್ ಖಾತೆ: ಲೇವಡಿ ಟ್ವೀಟ್ ಮಾಡಿದ್ದ ಟೆಕಿ ಬಂಧನ

Shilpa D
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ತೆರೆದು, ಅದರಲ್ಲಿ ಅವಹೇಳನಕಾರಿ ಸ್ಟೇಟಸ್‌ಗಳನ್ನು ಹಾಕಿದ್ದ ಮಧುಸೂದನ್ (29) ಎಂಬ ಸಾಫ್ಟ್‌ವೇರ್ ಉದ್ಯೋಗಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಡ್ಯದ ಮಧುಸೂದನ್, 2 ವರ್ಷಗಳ ಹಿಂದೆ ನಗರಕ್ಕೆ ಬಂದು ಆಡುಗೋಡಿಯಲ್ಲಿ ನೆಲೆಸಿದ್ದ. ಐಪಿ ವಿಳಾಸ ಆಧರಿಸಿ 6 ತಿಂಗಳಿನಿಂದ ಆರೋಪಿಯನ್ನು ಹುಡುಕುತ್ತಿದ್ದ ಸೈಬರ್ ವಿಭಾಗದ ಡಿವೈಎಸ್ಪಿ ಶರತ್‌ ನೇತೃತ್ವದ ತಂಡ, ಕೊನೆಗೂ ಶನಿವಾರ ಮಧುಸೂದನ್ ಅವರನ್ನು ಪತ್ತೆ ಮಾಡಿದೆ.
ಸಿದ್ದರಾಮಯ್ಯ ಅವರು '@CMofKarnataka' ಹೆಸರಿನಲ್ಲಿ ಅಧಿಕೃತ ಟ್ವಿಟರ್ ಖಾತೆ ಹೊಂದಿದ್ದಾರೆ. ಸರ್ಕಾರದ ಯೋಜನೆಗಳು, ಅಭಿವೃದ್ಧಿ ಕಾರ್ಯಗಳು ಹಾಗೂ ತಮ್ಮ ಅಭಿಪ್ರಾಯಗಳನ್ನು ಅದರಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಆದರೆ, 2016ರ ಡಿಸೆಂಬರ್‌ನಲ್ಲಿ ‘@CMoKarnataka’ (f ಅಕ್ಷರ ಬಿಟ್ಟು) ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ ಮಧುಸೂದನ್, ಅಧಿಕೃತ ಖಾತೆಯಲ್ಲಿದ್ದ ಕೆಲ ಫೋಟೊಗಳನ್ನು ಇದರಲ್ಲಿ ಪ್ರಕಟಿಸಿ ವಿವಾದಾತ್ಮಕ ಟ್ವೀಟ್‌ಗಳನ್ನು ಮಾಡಿದ್ದರು.
ಅಲ್ಲದೆ, ನಕಲಿ ಖಾತೆಯ ಪ್ರೊಫೈಲ್‌ನಲ್ಲಿ ‘ಪರೋಡಿ ಅಕೌಂಟ್, ಮಜವಾದಿ, ಸೋಷಿಯೊ ಸೆಕ್ಟರ್ ಅಭಿವೃದ್ಧಿ, ಅಲ್ಪಸಂಖ್ಯಾತರ ಉದ್ಧಾರ ನಮ್ಮ ಗುರಿ’ ಎಂಬ ಸ್ಟೇಟಸ್‌ಗಳನ್ನು ಬರೆದಿದ್ದರು. ಈ ಸಂಬಂಧ ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರರು ಡಿ. 29ರಂದು ಸೈಬರ್ ವಿಭಾಗಕ್ಕೆ ದೂರು ಕೊಟ್ಟಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಬಳಿಕ ಗಾಬರಿಗೊಂಡ ಮಧುಸೂದನ್‌, ತಕ್ಷಣ ನಕಲಿ ಖಾತೆಯನ್ನು ತೆಗೆದುಹಾಕಿದ್ದರು.
ಇಡೀ ಸರ್ಕಾರವನ್ನು ಟೀಕೆ ಮಾಡಬೇಕು ಹಾಗೂ ಆ ಮೂಲಕ ಸಾರ್ವಜನಿಕ ವಲಯದಲ್ಲಿ ನನ್ನ ಬಗ್ಗೆ ಚರ್ಚೆಯಾಗಬೇಕು ಎಂಬ ಉದ್ದೇಶದಿಂದ ನಕಲಿ ಖಾತೆ ತೆರೆದು, ಮೂರ್ನಾಲ್ಕು ದಿನ ವಿವಾದಾತ್ಮಕ ಸ್ಟೇಟಸ್‌ಗಳನ್ನು ಪ್ರಕಟಿಸಿದ್ದೆ ಎಂದು ವಿಚಾರಣೆ ವೇಳೆ ಆರೋಪಿ ಹೇಳಿಕೆ ಕೊಟ್ಟಿದ್ದಾಗಿ ತಿಳಿದು ಬಂದಿದೆ.
SCROLL FOR NEXT