ರಾಜ್ಯ

ನಾಗರಹೊಳೆ ವಿಷದ ಕಿಚ್ಚಿಗೆ 5 ಜಿಂಕೆಗಳು, 7 ಕಾಡು ಕುರಿಗಳು ಬಲಿ

Manjula VN
ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಐದು ಜಿಂಕೆಗಳು ದಾರುಣವಾಗಿ ಮೃತಪಟ್ಟಿದ್ದು, ನೀರಿನಲ್ಲಿ ಬೆರಕೆಯಾಗಿರುವ ವಿಷವೇ ಜಿಂಕೆಗಳ ಸಾವಿಗೆ ಕಾರಣ ಎಂದು ಶಂಕಿಸಲಾಗುತ್ತಿದೆ. 
ಹೆಚ್.ಡಿ.ಕೋಟೆ ತಾಲೂಕಿನ ಜಿ.ಎಂ. ಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಮೇಟಿಕುಪ್ಪ ಅರಣ್ಯ ವಲಯದಲ್ಲಿ 7 ಕಾಡು ಕುರಿ ಹಾಗೂ ಐದು ಜಿಂಕೆಗಳು ಸಾವನ್ನಪ್ಪಿವೆ. 
ಹೆಬ್ಬಳದಲ್ಲಿರುವ ಕೊಳದ ನೀರಿನ ಬಳಿ ಅರಣ್ಯ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದ ವೇಳೆ ಕಾಡು ಕುರಿ ಮತ್ತು ಜಿಂಕೆ ಮರಿಗಳು ಮೃತಪಟ್ಟಿರುವುದನ್ನು ಗಮನಿಸಿದ್ದಾರೆ. ಕೂಡಲೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. 
ಉದ್ಯಾನದಿಂದ ಕೆಲವೇ ದೂರದಲ್ಲಿ ಕೃಷಿ ಭೂಮಿಯಿದ್ದು, ಕೃಷಿ ಭೂಮಿಯಲ್ಲಿ ಪ್ರಾಣಿಗಳು ಕೆಲ ವಿಷ ಬೀಜಗಳನ್ನು ತಿಂದಿರಬೇಕು. ಗಂಟಲು ಒಣಿಗಿದ ಬಳಿಕ ನೀರು ಕಡಿಯಲು ಬಂದಾಗ ಪ್ರಾಣಿಗಳು ಮೃತಪಟ್ಟಿರಬಹುದು ಎಂದು ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದ ನಿರ್ದೇಶಕ ಎಸ್. ಮಣಿಕಾಂತನ್ ಅವರು ಹೇಳಿದ್ದಾರೆ. 
ಪ್ರಾಣಿಗಳ ಕೆಲ ಭಾಗಗಳನ್ನು ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕವಷ್ಟೇ ಪ್ರಾಣಿಗಳ ಸಾವಿಗೆ ನಿಖರ ಕಾರಣಗಳು ತಿಳಿದುಬರಲಿದೆ ಎಂದು ತಿಳಿಸಿದ್ದಾರೆ. 
ಮೇಟಿಕುಪ್ಪದಲ್ಲಿ ಒಟ್ಟು 28 ನೀರಿನ ಕೊಳಗಳಿದ್ದು, ಇದರಲ್ಲಿ ಈಗಾಗಲೇ 22 ಕೊಳಗಳು ಬತ್ತು ಹೋಗಿವೆ. ಕೊಳಗಳಲ್ಲಿ ನೀರು ತುಂಬಿಸಲು ಅರಣ್ಯ ಇಲಾಖೆ ಸಾಕಷ್ಟು ಶ್ರಮಗಳನ್ನು ಪಡುತ್ತಿವೆ. ನೀರಿನ ಅಭಾವದಿಂದಾಗಿ ಜಿಂಕೆಗಳು ಕಾಡು ಕುರಿಗಳು ಹೊರಗೆ ಬರುವುದು ಸಾಮಾನ್ಯವಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ. 
ಕಾಡು ಕುರಿ ಮತ್ತು ಜಿಲ್ಲೆಗಳ ಸಾವಿನ ಸಂಬಂಧ ಹೆಚ್.ಡಿ.ಕೋಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 
SCROLL FOR NEXT