ಮಂಗಳೂರು: ಸರ್ಕಾರ ಎಷ್ಟೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿದ್ದರೂ, ಈಗಲೂ ಶಿರಡಿ ಘಾಟ್ ರಸ್ತೆಯಲ್ಲಿ ಪ್ರಯಾಣಿಕರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ರಸ್ತೆಗಳಲ್ಲಿ ವಾಹನಗಳು ಸಂಚಾರ ನಡೆಸುತ್ತಿದ್ದಂತೆಯೇ ಧೂಳು ಮೇಲೇಳುತ್ತಿದೆ. ಇದರಿಂದ ಪ್ರಯಾಣಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ರಸ್ತೆ ಯಾವಾಗ ಸರಿಹೋಗುತ್ತದೆ? ಟೀ ಕುಡಿಯಲು ಬರುವ ಪ್ರತೀಯೊಬ್ಬ ಚಾಲಕರು ಈ ಪ್ರಶ್ನೆಯನ್ನು ಕೇಳುತ್ತಾರೆ. ಕೆಲವರು ಉತ್ತರವನ್ನು ಕೇಳಿಸಿಕೊಳ್ಳದೆಯೇ ಹೊರಟು ಹೋಗುತ್ತಾರೆ. ಇನ್ನು ಕೆಲವರು ಟೀ ಕುಡಿದು ಬೇಸರ ವ್ಯಕ್ತಪಡಿಸಿ ಹೋಗುತ್ತಾರೆಂದು ರಾಷ್ಟ್ರೀಯ ಹೆದ್ದಾರಿ ಗುಂಡ್ಯಾ ಗೇಟ್ ಬಳಿ ಟೀ ವ್ಯಾಪಾರ ಮಾಡುವ ವ್ಯಕ್ತಿಯೊಬ್ಬರು ಹೇಳಿದ್ದಾರೆ.
2015ರಲ್ಲಿ ಶಿರಡಿ ಘಾಟ್ ರಸ್ತೆಯ ಕಾಮಗಾರಿಗೆ ವರ್ಕ್ ಆರ್ಡರ್ ಆಗಿತ್ತು. ಕೆಂಪ್ಹೊಳೆಯಿಂದ ಗುಂಡ್ಯಾ ಗೇಟ್ ವರೆಗೂ 30 ಕಿ.ಮೀ ರಸ್ತೆಗಳಲ್ಲಿ ಎರಡನೇ ಹಂತದಲ್ಲಿ ಕಾಂಕ್ರೀಟ್ ಹಾಕಬೇಕಾಗಿತ್ತು. ಶಿರಡಿ ಘಾಟ್ ರಸ್ತೆಯ 2ನೇ ಹಂತದ ಕಾಮಗಾರಿಯಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ರಸ್ತೆಗಳಿಗೆ ಕಾಂಕ್ರೀಟ್ ಹಾಕುವ ಕೆಲಸವೂ ಕೂಡ ಹಾಳಾಗಿದೆ ಎಂದು ಟೀ ವ್ಯಾಪಾರಿ ಗಿರೀಶ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.