ಬೆಂಗಳೂರು: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂಗೀತ ರಿಯಾಲಿಟಿ ಕಾರ್ಯಕ್ರಮದಲ್ಲಿ ಹಿಂದೂ ದೇವರ ಗೀತೆ ಹಾಡಿ ತನ್ನ ಸಮುದಾಯದವರ ಕೆಂಗಣ್ಣಿಗೆ ಗುರಿಯಾಗಿದ್ದ ಸಾಗರ ತಾಲ್ಲೂಕಿನ ಸುಹಾನಾ ಸಯೀದ್ ಗೆ ಸಂಸದ ಪ್ರತಾಪ್ ಸಿಂಹ ಬೆಂಬಲ ವ್ಯಕ್ತಪಡಿಸಿದ್ದು, ನಿಮ್ಮೊಂದಿಗೆ ನಾವಿದ್ದೇವೆ ವಿರೋಧಿಗಳಿಗೆ ಹೆದರಬೇಡಿ ಎಂದು ನೈತಿಕ ಸ್ಥೈರ್ಯ ತುಂಬಿದ್ದಾರೆ.
ಚಾನೆಲ್ ನಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸುಹಾನಾ ಸಯೀದ್ ಹಿಂದೂ ದೇವರ ಕುರಿತಾದ ಹಾಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿ, ''ಸುಹಾನಾ ನೀನು ಪುರುಷರ ಎದುರು ಹಾಡಿ ಮುಸ್ಲಿಂ ಸಮುದಾಯಕ್ಕೆ ಕಳಂಕ ತಂದಿದ್ದೀಯಾ ಎಂದು ವಿರೋಧಿಸಿದ್ದರು. ಅಷ್ಟೇ ಅಲ್ಲದೇ ಬೆದರಿಕೆ ಸಹ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಸುಹಾನಾಗೆ ಬೆಂಬಲ ಸೂಚಿಸಿದ್ದಾರೆ.
ಇದೇ ವೇಳೆ ಆಹಾರ ಪೂರೈಕೆ ಸಚಿವ ಯುಟಿ ಖಾದರ್ ಸಹ ಸುಹಾನ ಸಯೀದ್ ಗೆ ಬೆಂಬಲ ವ್ಯಕ್ತಪಡಿಸಿದ್ದು, ಸುಹಾನಾ ಗೆ ಯಾರಾದರೂ ಬೆದರಿಕೆ ಹಾಕಿದರೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಚಾಮರಾಜನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸುಹಾನಾ ಗೆ ಬೆದರಿಕೆ ಹಾಕಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು, ಸಾಮಾಜಿಕ ಜಾಲತಾಣಗಳಲ್ಲಿ ಸುಹಾನ ವಿರುದ್ಧ ಪೋಸ್ಟ್ ಮಾಡುವವರ ವಿರುದ್ಧ ಸೈಬರ್ ಕ್ರೈಂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಶೇ.99 ರಷ್ಟು ಮಂದಿ ಸುಹಾನಾ ಗೆ ಬೆಂಬಲವಾಗಿ ನಿಂತಿದ್ದಾರೆ ಶೇ.1 ರಷ್ಟು ಜನರು ಮಾತ್ರ ವಿರೋಧಿಸುತ್ತಿದ್ದಾರೆ ಎಂದು ಖಾದರ್ ಹೇಳಿದ್ದಾರೆ.
ಸಹಿಷ್ಣುತೆ ಬೋಧನೆ ಮಾಡೋ ಬುದ್ಧಿ ಜೀವಿಗಳು ಎಲ್ಲಿ ಹೋದರು: ಪ್ರತಾಪ್ ಸಿಂಹ ಪ್ರಶ್ನೆ
ಹಿಂದೂ ದೇವರ ಕುರಿತಾದ ಹಾಡು ಹೇಳಿದ್ದಕ್ಕೆ ಸುಹಾನಾ ಸಯೀದ್ ಗೆ ಸ್ವಸಮುದಾಯದಿಂದಲೇ ವಿರೋಧ ವ್ಯಕ್ತವಾಗುತ್ತಿದ್ದರೂ ಪ್ರತಿಭಟನೆ ನಡೆಸದ ಬುದ್ಧಿಜೀವಿ, ವಿಚಾರವಾದಿಗಳ ವಿರುದ್ಧ ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಚಾನೆಲ್‍ಗಳಲ್ಲೂ ಕೂಡ ಸುಹಾನ ವಿರುದ್ಧ ನಡೆಯುತ್ತಿರುವ ಅಭಿಯಾನದ ಬಗ್ಗೆ ವರದಿಯಾಗಿದೆ. ಆದರೆ ಸಹಿಷ್ಣುತೆಯ ಬೋಧನೆ ಮಾಡುವ ವಿಚಾರವಾದಿಗಳು, ಬುದ್ಧಿಜೀವಿಗಳು ಮಾತ್ರ ಆಕೆಗೆ ಬೆಂಬಲ ನೀಡಿಲ್ಲ, ಆಕೆಯ ವಿರುದ್ಧ ನಡೆಯುತ್ತಿರುವ ಅಭಿಯಾನವನ್ನು ಖಂಡಿಸಿಲ್ಲ. ಅನ್ಯ ಧರ್ಮದ ದೇವರ ಕುರಿತಾದ ಹಾಡು ಹಾಡಿದ ಹುಡುಗಿ ವಿರುದ್ಧ ಅಸಹುಷ್ಣುತೆ ವ್ಯಕ್ತವಾಗುತ್ತಿದ್ದರೂ ಭಗವಾನ್, ಜಿ.ಕೆ ಗೋವಿಂದ ರಾವ್, ಗಿರೀಶ್ ಕಾರ್ನಾಡ್ ಇನ್ನು ಕೆಲವರೆಲ್ಲಾ ಈಗ ಮೌನ ವಹಿಸಿದ್ದಾರೆ. ಇವರಿಗೆ ಸಹಿಷ್ಣುತೆಯ ಪಾಠ ಈಗ ಮರೆತು ಹೋಗಿದೆಯಾ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.