ತುಮಕೂರು: ತುಮಕೂರು ವಸತಿ ಶಾಲೆಯಲ್ಲಿ ವಿಷಾಹಾರ ತಿಂದು ಮೂವರು ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾವಾರಿಧಿ ಶಾಲೆ ಮಾಲೀಕ ಕಿರಣ್ ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತುಮಕೂರಿನ ಚಿಕ್ಕನಾಯಕನಹಳ್ಳಿಯ ಹುಳಿಯಾರು ಪೊಲೀಸ್ ಠಾಣೆ ಪೊಲೀಸರು ವಿದ್ಯಾವಾರಿಧಿ ಶಾಲೆ ಮಾಲೀಕ ಹಾಗೂ ಮಾಜಿ ಶಾಸಕ ಕಿರಣ್ ಕುಮಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ವಿದ್ಯಾವಾರಿಧಿ ವಸತಿ ಶಾಲೆಯಲ್ಲಿ ಊಟ ಸೇವಿಸಿದ ನಾಲ್ಕು ವಿದ್ಯಾರ್ಥಿಗಳು ಹಾಗೂ ಓರ್ವ ಗಾರ್ಡ್ ತೀವ್ರ ಅಸ್ವಸ್ಥರಾಗಿದ್ದರು. ಈ ಪೈಕಿ ಶಾಂತಮೂರ್ತಿ, ಆಕಾಂಕ್ಷ ಪಲ್ಲಕ್ಕಿ ಮತ್ತು ಶ್ರೇಯಸ್ ಎಂಬ ಮೂವರು ವಿದ್ಯಾರ್ಥಿಗಳು ಮಾರ್ಗ ಮಧ್ಯೆ ಸಾವನ್ನಪ್ಪಿದ್ದು, 45 ವರ್ಷದ ಗಾರ್ಡ್, ಹಾಗೂ 15 ವರ್ಷದ ವಿದ್ಯಾರ್ಥಿ ಸುದರ್ಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ವಿದ್ಯಾರ್ಥಿ ಸುದರ್ಶನ್ ಪ್ರಾಣಾಪಾಯದಿಂದ ಪಾರಾಗಿದ್ದಾರಾದರೂ, ಅವರನ್ನು ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಮುಂದುವರೆಸಲಾಗಿದೆ. ಆದರೆ ಗಾರ್ಡ್ ಸ್ಥಿತಿ ಇನ್ನೂ ಚಿಂತಾಜನಕವಾಗಿದ್ದು, ಅವರಿಗೆ ಕೃತಕ ಉಸಿರಾಟ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಪ್ರಕರಣ ಸಂಬಂಧ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ತನಿಖೆ ಆದೇಶಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಹುಳಿಯಾರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ವಸತಿ ಶಾಲೆಯ ಸಿಬ್ಬಂದಿಗಳನ್ನು ಒಂದು ಸುತ್ತಿನ ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಇದೀಗ ವಸತಿ ಶಾಲೆ ಮಾಲೀಕರಾದ ಕಿರಣ್ ಕುಮಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ.