ಶೇಶಾದ್ರಿಪುರಂ ಕಾಲೇಜಿನಲ್ಲಿ ಪರೀಕ್ಷೆ ಬರೆದು ಹೊರಬಂದ ವಿದ್ಯಾರ್ಥಿಗಳು ಸಂತಸದಿಂದಿರುವುದು.
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಎರಡನೇ ದಿನವಾದ ನಿನ್ನೆ ಅನೇಕ ವಿದ್ಯಾರ್ಥಿಗಳಿಗೆ ಸುಲಭವಾಗಿದೆ. ನಿನ್ನೆ ವಿಜ್ಞಾನ ವಿಷಯದ ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಪರೀಕ್ಷೆಗಳಿದ್ದು ಎರಡೂ ಪರೀಕ್ಷೆಗಳು ಸುಲಭವಾಗಿದ್ದವು ಎಂದು ವಿದ್ಯಾರ್ಥಿಗಳು ಹೇಳುತ್ತಾರೆ. ಅವಧಿ ಮುಗಿಯುವ ಒಂದು ಗಂಟೆಗೇ ಮೊದಲು ಕೆಲವರು ಪರೀಕ್ಷೆ ಬರೆದು ಮುಗಿಸಿದ್ದರು.
ಡಿಸಿಎಫ್ಎಲ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಅಭಿನವ್.ಜೆ, ಪ್ರಶ್ನೆ ಪತ್ರಿಕೆ ನಾವು ಅಂದುಕೊಂಡದ್ದಕ್ಕಿಂತ ಸುಲಭವಾಗಿತ್ತು. ನಾನು ಅವಧಿ ಮುಗಿಯುವ ಒಂದು ಗಂಟೆಗೆ ಮೊದಲೇ ಮುಗಿಸಿದೆ. ಪಿಯು ಮಂಡಳಿಯ ಪಠ್ಯಪುಸ್ತಕ ಮತ್ತು ಕಾಲೇಜಿನ ಪ್ರಶ್ನೋತ್ತರ ಬ್ಯಾಂಕಿನ ಪುಸ್ತಕದಿಂದ ನಾನು ಅಭ್ಯಾಸ ಮಾಡಿದೆ ಎನ್ನುತ್ತಾನೆ.
ಎಂಇಎಸ್ ಪಿಯು ಕಾಲೇಜಿನ ವಿದ್ಯಾರ್ಥಿ ಸುಮಯ್ಯ, ಎಲ್ಲಾ ಪ್ರಶ್ನೆಗಳು ನೇರವಾಗಿದ್ದವು. ಗೊಂದಲವಿರಲಿಲ್ಲ. ಅಷ್ಟು ಸುಲಭವಾಗಿ ಪ್ರಶ್ನೆಗಳಿರಬಹುದು ಎಂದು ನಾನು ಅಂದುಕೊಂಡಿರಲಿಲ್ಲ. ಉಳಿದ ವಿಷಯಗಳ ಪರೀಕ್ಷೆಗಳು ಸುಲಭವಾಗಬಹುದು ಎಂದು ನಾನು ಭಾವಿಸುತ್ತೇನೆ ಎನ್ನುತ್ತಾನೆ.
ಉಪನ್ಯಾಸಕರಿಗೆ ಕೂಡ ಆಶ್ಚರ್ಯವಾಗಿದೆ. ದೀಕ್ಷ ಕಾಲೇಜಿನ ಉಪಾಧ್ಯಕ್ಷ ಡಾ.ಮಿಲಿಂದ್, ಕಳೆದ ವರ್ಷಕ್ಕಿಂತ ಈ ವರ್ಷ ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಪರೀಕ್ಷೆಗಳು ಸುಲಭವಾಗಿದ್ದವು. ಒಂದೆರಡು ಪ್ರಶ್ನೆಗಳು ಟ್ರಿಕಿಯಾಗಿರುವುದು ಬಿಟ್ಟರೆ ಉಳಿದೆಲ್ಲಾ ಪ್ರಶ್ನೆಗಳು ನೇರವಾಗಿದ್ದವು ಎನ್ನುತ್ತಾರೆ.
ತುಮಕೂರು ಜಿಲ್ಲೆಯಲ್ಲಿ ಅಕ್ರಮ ನಡೆದಿರುವ ಘಟನೆ ಬಿಟ್ಟರೆ ರಾಜ್ಯಾದ್ಯಂತ ಬೇರೆ ಯಾವುದೇ ಅಹಿತಕರ ಘಟನೆಗಳು ಇದುವರೆಗೆ ವರದಿಯಾಗಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ ತಿಳಿಸುತ್ತಾರೆ. ಪರೀಕ್ಷೆಗಳು ಸುಗಮವಾಗಿ ನಡೆಯುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಇತರ ಯಾವುದೇ ಅಕ್ರಮ ಕೃತ್ಯಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ ಎನ್ನುತ್ತಾರೆ.