ದಿಶಾ ಚೌಧರಿ ಮತ್ತು ಸಚಿನ್ ನಾಯಕ್
ಬೆಂಗಳೂರು: ಫ್ಲ್ಯಾಟ್ ಹಾಗೂ ನಿವೇಶನ ನೀಡುವುದಾಗಿ ನೂರಾರು ಜನರಿಂದ ಹಣ ಪಡೆದು ವಂಚನೆ ಮಾಡಿರುವ ಟಿಜಿಎಸ್ ರಿಯಲ್ ಎಸ್ಟೇಟ್ ಗ್ರೂಪ್ ಮತ್ತು ಡ್ರೀಮ್ಸ್ ಜಿ.ಕೆ ಕಂಪನಿ ಮಾಲೀಕ ಸಚಿನ್ ನಾಯಕ್ ನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.
ಗ್ರಾಹಕರಿಗೆ ನೂರಾರು ಕೋಟಿ ಹಣ ವಂಚಿಸಿರುವ ಆರೋಪದ ಮೇಲೆ ಸಚಿನ್ ನಾಯಕ್ ನನ್ನು ಸೋಮವಾರ ಬಂಧಿಸಲಾಗಿದೆ, 2016 ರ ಡಿಸೆಂಬರ್ ನಲ್ಲಿ ಸಚಿನ್ ನಾಯಕ್ ಮತ್ತು ಆತನ ಪತ್ನಿ ದಿಶಾ ಚೌಧರಿ, ಹಾಗೂ ಕಂಪನಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಬಂಧಿಸಲಾಗಿತ್ತು.
ಕೆಲ ಸಮಯದ ನಂತರ ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದಿದ್ದರು. ಇದೇ ವೇಳೆ 2 ಸಾವಿರ ಮಂದಿಗೆ ವಂಚನೆ ಮಾಡಿರುವ ಟಿಜಿಎಸ್ ಕನ್ ಸ್ಟ್ರಕ್ಷನ್, ಡ್ರೀಮ್ಸ್ ಜಿ.ಕೆ . ಟಿಜಿಎಸ್ ರಿಯಲ್ ಎಸ್ಟೇಟ್, ಸೆಂಡ್ ಮೈ ಗಿಫ್ಟ್, ಡೈಲಿ ಪೂಜಾ.ಕಾಮ್ ಮತ್ತು ಗೃಹ ಕಲ್ಯಾಣ ಕಂಪನಿಗಳ ವಿರುದ್ಧ ಸಿಐಡಿ ತನಿಖೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.
ಸಚಿನ್ ನಾಯಕ್ ನಡೆಸುತ್ತಿದ್ದ ಈ ಕಂಪನಿಗಳಿಗೆ ಆತನ ಪತ್ನಿ ದಿಶಾ ಚೌಧರಿ ಸಿಇಓ ಆಗಿ ನೇಮಕಗೊಂಡಿದ್ದಳು. ಸಾವಿರಾರು ಗ್ರಾಹಕರಿಂದ ನೂರಾರು ಕೋಟಿ ಹಣವನ್ನು ಮುಂಗಡವಾಗಿ ಪಡೆದಿದ್ದ ಸಚಿನ್ ನಾಯಕ್ ಅವರಿಗೆ ಪ್ಲ್ಯಾಟ್ ಗಳನ್ನು ನೀಡಿರಲಿಲ್ಲ, ಹೆಚ್ ಎಸ್ ಆರ್ ಲೇಔಟ್, ಬೆಳ್ಳಂದೂರು, ಆನೇಕಲ್, ಮತ್ತು ಎಲಕ್ಟ್ರಾನಿಕ್ ಸಿಟಿಗಳಲ್ಲಿ ನಿರ್ಮಾಣ ಹಂತದ ಕಟ್ಟಡಗಳನ್ನು ತೋರಿಸಿ ಅನಿವಾಸಿ ಭಾರತೀಯರು ಸೇರಿದಂತೆ ಹಲವು ಮಂದಿಗೆ ವಂಚಿಸಿದ್ದನು. ಪ್ರಕರಣ ಸಿಐಡಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಆತನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳವಾರ ಬೆಳಗ್ಗೆ 10 ಗಂಟೆಗೆ ಆನಂದ್ ರಾವ್ ಸರ್ಕಲ್ ನಲ್ಲಿ ಜಮಾಯಾಸಿದ್ದ ಸುಮಾರು 1000 ಕ್ಕೂ ಹೆಚ್ಚು ಜನ ವಂಚಕ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.ಜೊತೆಗೆ ಗೃಹ ಸಚಿವರನ್ನು ಭೇಟಿ ಮಾಡಿ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.