ಬೆಂಗಳೂರು: ರಾಜ್ಯದಲ್ಲಿ ಸಚಿವರ ಮನೆ ಮೇಲೆ ಐಟಿ ದಾಳಿ ನಡೆಯುವ ಸಾಧ್ಯತೆ ಹಾಗೂ ತಮ್ಮ ದೂರವಾಣಿ ಕದ್ದಾಲಿಕೆಯಾಗುತ್ತಿದೆ ಎಂಬ ಡಿ.ಕೆ ಶಿವಕುಮಾರ್ ಅವರ ಆರೋಪ ಮಾಡಿರುವ ವರದಿ ಪ್ರಕಟಗೊಂಡ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಐಟಿ ದಾಳಿ, ದೂರವಾಣಿ ಕದ್ದಾಲಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿರುವ ಸಿಎಂ ಈ ರೀತಿಯ ಕೆಲಸಗಳನ್ನು ಖಂಡಿಸುವುದಾಗಿ ಹೇಳಿದ್ದಾರೆ.
ಇನ್ನು ಬಿಜೆಪಿ ಪಕ್ಷದ ನಾಯಕರ ಮೇಲೆ ಏಕೆ ಐಟಿ ದಾಳಿ ನಡೆಯುವುದಿಲ್ಲ ಎಂದು ಪ್ರಶ್ನಿಸಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿಯಲ್ಲಿ ತೆರಿಗೆ ಕಟ್ಟುವವರು ಯಾರೂ ಇಲ್ವಾ? ಆ ಪಕ್ಷದಲ್ಲಿ ಯಾರೂ ಶ್ರೀಮಂತರು ಇಲ್ವಾ? ಎಂದು ಕೇಳಿದ್ದಾರೆ. ಕೇಂದ್ರ ಸರ್ಕಾರ ರಾಜಕೀಯ ಪ್ರೇರಿತ ಐಟಿ ದಾಳಿ ನಡೆಸುತ್ತಿದೆ. ಕೇಂದ್ರ ಸರ್ಕಾರದಿಂದ ಕುಮ್ಮಕ್ಕಿನಿಂದಲೇ ಐಟಿ ದಾಳಿ ನಡೆಯುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿರುವ ಐಟಿ ಅಧಿಕಾರಿಗಳ ತಂಡ ಅಗತ್ಯ ಮಾಹಿತಿ ಕಲೆ ಹಾಕುವಲ್ಲಿ ನಿರತವಾಗಿದೆ. ಇದಕ್ಕೆ ಪೂರಕವೆಂಬಂತೆ ಇಂಧನ ಸಚಿವ ಡಿಕೆ ಶಿವಕುಮಾರ್ ತಮ್ಮ ದೂರವಾಣಿ ಸಂಭಾಷಣೆಯನ್ನ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.