ಚಿತ್ರದುರ್ಗ: ಲಾರಿ ಟೈರ್ ಸ್ಪೋಟಗೊಂಡ ಪರಿಣಾಮ ಭೀಕರ ಸರಣಿ ಅಪಘಾತ ಸಂಭವಿಸಿದ್ದು, 13 ಮಂದಿ ಸಾವಿಗೀಡಾದ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.
ಮಾಧ್ಯಮಗಳ ವರದಿಯನ್ವಯ ಬತ್ತದ ಹೊಟ್ಟು ತುಂಬಿಕೊಂಡು ಬಳ್ಳಾರಿ ಕಡೆಯಿಂದ ಚಳ್ಳಕೆರೆಗೆ ಬರುತ್ತಿದ್ದ ಲಾರಿಯ ಟೈರ್ ಸ್ಪೋಟಗೊಂಡ ಪರಿಣಾಮ ನಿಯಂತ್ರಣ ತಪ್ಪಿದ ಲಾರಿ ಎರಡು ಆಟೋ ಹಾಗೂ ಟೆಂಪೋ ಟ್ರಾವೆಲರ್ಸ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಆಟೋದಲ್ಲಿದ್ದ ಸುಮಾರು 13 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೃತರು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಬೇವಿನ ಹಳ್ಳಿಯ ಶಿವರಾಜ್ ಮತ್ತು ಲಿಂಗಪ್ಪ ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮೃತರೆಲ್ಲರೂ ಕುಲುಮೆ ಕಾರ್ಮಿಕರು ಎಂದು ತಿಳಿದುಬಂದಿದೆ. ಮೃತರ ಪೈಕಿ 7 ಪುರುಷರು, 3 ಮಹಿಳೆಯರು ಮತ್ತು 3 ಮಕ್ಕಳು ಎಂದು ತಿಳಿದುಬಂದಿದೆ. ಮೃತರ ವಿವರ ತಿಳಿದುಬಂದಿಲ್ಲವಾದರೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಲಾರಿ ಚಕ್ರ ಸ್ಫೋಟವಾಗುತ್ತಿದ್ದಂತೆಯೇ ಲಾರಿ ಚಾಲಕನ ನಿಯಂತ್ರಣ ತಪ್ಪಿದ್ದು, ಬಳಿಕ 2 ಆಟೋಗಳಿಗೆ ಢಿಕ್ಕಿ ಹೊಡೆದಿದೆ. ನಂತರ ಸಮೀಪದಲ್ಲೇ ಇದ್ದ ಟಿಟಿ ವಾಹನಕ್ಕೂ ಲಾರಿ ಢಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.