ಬೆಂಗಳೂರು: ಮಹಿಳೆಯರ ಭದ್ರತೆ ಹಾಗೂ ಸುರಕ್ಷತೆ ಪ್ರಮುಖವಾಗಿದ್ದು, ಐಟಿ, ಬಿಟಿ ಕಂಪನಿಗಳಲ್ಲಿ ಮಹಿಳೆಯರಿಗೆ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಬಾರದು ಎಂದು ಸದನ ಸಮಿತಿಯೊಂದು ಸರ್ಕಾರಕ್ಕೆ ಸೋಮವಾರ ಶಿಫಾರಸು ಮಾಡಿದೆ.
ನಗರದ ಐಟಿ-ಬಿಟಿ ಕಂಪನಿಗಳಲ್ಲಿ ಮಹಿಳೆಯರನ್ನು ಬೆಳಿಗ್ಗೆ ಮತ್ತು ಮಧ್ಯಾಹ್ನದ ಪಾಳಿಗೆ ಮಾತ್ರ ಕೆಲಸಕ್ಕೆ ನಿಯೋಜಿಸಬೇಕು. ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವುದಕ್ಕೆ ಮಹಿಳೆಯರಿಗೆ ಅವಕಾಶವನ್ನು ನೀಡಬಾರದು ಎಂದು ವಿಧಾನಸಭೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಶಾಸಕ ಎನ್. ಎ. ಹ್ಯಾರೀಸ್ ನೇತೃತ್ವದ ವಿಧಾನಸಭೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಮಹಿಳೆಯರು, ಮಕ್ಕಳು, ಅಂಗವಿಕಲರು, ಬುದ್ಧಿಮಾಂದ್ಯರು, ಹಿರಿಯ ನಾಗರಿಕರು ಮತ್ತು ಲಿಂಗತ್ವ ಅಲ್ಪಸಂಖ್ಯಾತರರ ಕಲ್ಯಾಣ, ರಕ್ಷಣೆ ಹಾಗೂ ಉದ್ಯೋಗ ಮೀಸಲು ಸಂಬಂಧ ಇರುವ ಕಾರ್ಯಕ್ರಮಗಳ ಅನುಷ್ಠಾನ ಕುರಿತು ನಡೆಸಿದ ಪ್ರಗತಿ ಪರಿಶೀಲನಾ ವರದಿಯಲ್ಲಿ ಈ ಎಲ್ಲಾ ಅಂಶಗಳನ್ನು ಚರ್ಚಿಸಲಾಗಿದೆ. ಅಲ್ಲದೆ, ಈ ಎಲ್ಲಾ ವರ್ಗಗಳ ಕುಂದುಕೊರತೆಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಮುಖ ಶಿಫಾರಸುಗಳನ್ನು ಸಮಿತಿ ಮಾಡಿದೆ.
ಸಮಿತಿಯ ಸದಸ್ಯರು ನಗರದ ಬಯೋಕಾನ್ ಮತ್ತು ಇನ್ಫೋಸಿಸ್ ಕಂಪನಿಗಳಿಗೆ ಭೇಟಿ ನೀಡಿದ ಸಮಯದಲ್ಲಿ ಅನೇಕ ಸಮಸ್ಯೆಗಳು ಕಂಡುಬಂದಿದ್ದವು.
ಈ ಹಿನ್ನಲೆಯಲ್ಲಿ ಐಟಿ-ಬಿಟಿ ಕಂಪನಿಗಳಲ್ಲಿ ಸ್ತ್ರೀಯರು ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವುದರಿಂದ ಎದುರಾಗಬಹುದಾದ ಸಮಸ್ಯೆಗಳ ಹಿನ್ನಲೆಯಲ್ಲಿ ಅನೇರ ಶಿಫಾರಸುಗಳನ್ನು ಮಾಡಲಾಗಿದೆ. ಈ ಪೈಕಿ ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಬಾರದು, ರಾತ್ರಿ ಪಾಳಿಗೆ ಪುರುಷರನ್ನು ಮಾತ್ರ ನಿಯೋಜಿಸಬೇಕೆಂದು ಸಲಹೆ ನೀಡಲಾಗಿದೆ.
ಇದರಂತೆ ಅತ್ಯಾಚಾರ ಪ್ರಕರಣಗಳನ್ನು ಪರಿಶೀಲಿಸಿರುವ ಸಮಿತಿಯು, ಅನೇಕ ಅತ್ಯಾಚಾರ ಪ್ರಕರಣಗಳಲ್ಲಿ ಪೊಲೀಸರು ಅರೋಪಿಗಳನ್ನು ಬಂಧಿಸಿಲ್ಲ. ಇನ್ನೂ ಕೆಲ ಪ್ರಕರಣಗಳಲ್ಲಿ ವರ್ಷವಾದರೂ ಆರೋಪಿಗಳು ಬಂಧನಕ್ಕೊಳಗಾಗಿಲ್ಲ. ಆದ್ದರಿಂದ ಆರೋಪಿಗಳನ್ನು ಬಂಧಿಸಲು ಏನಾದರೂ ಕಾನೂನು ಸಮಸ್ಯೆಗಳಿದ್ದರೆ ಕಾನೂನಿನ ತಿದ್ದುಪಡಿ ತಂದು ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಬೇಕಿದೆ. ಗಾರ್ಮೆಂಟ್ಸ್ ಗಳಲ್ಲಿ ನೌಕರರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಡ್ಡಾಯವಾಗಿ ನೀಡಿದರೆ ಮಾತ್ರ ಕಾರ್ಖಾನೆಗಳಿಗೆ ಸರ್ಕಾರಿ ಸವಲತ್ತುಗಳನ್ನು ನೀಡಬೇಕು. ಮಹಿಳೆಯರಿಗೆ ಸಾರಿಗೆ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕಿದೆ.
ಶಾಲಾ ಮತ್ತು ಕಾಲೇಜುಗಳು ಮತ್ತು ಮಕ್ಕಲನ್ನು ಕರೆದೊಯ್ಯುವ ವಾಹನಗಳಲ್ಲೂ ಸಿಸಿಟಿವಿಗಳನ್ನು ಕಡ್ಡಾಯವಾಗಿ ಆಳವಡಿಸಿಬೇಕು. ಆದರೆ, ಅನೇಕ ಶಾಲೆಗಳಲ್ಲಿ ಸಿಸಿಟಿವಿಗಳಿಲ್ಲ. ವಾಹನಗಳಲ್ಲೂ ಇಲ್ಲ. ಇದನ್ನು ಮೇಲ್ವಿಚಾರಣೆ ಮಾಡಬೇಕಿದೆ. ವಿಕಲಚೇತನ, ಬುದ್ಧಿಮಾಂದ್ಯ ಮಕ್ಕಳಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಹೆಚ್ಚು ಮಾಡಬೇಕೆಂದು ಸಮಿತಿ ತನ್ನ ಶಿಫಾರಸಿನಲ್ಲಿ ತಿಳಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos