ವಿಧಾನ ಸೌಧದ ಹೊರಗೆ ನಿನ್ನೆ ನಡೆದ ತ್ಯಾಜ್ಯಗಳಿಂದ ಗೊಬ್ಬರ ತಯಾರಿಸುವ ವಿಧಾನವನ್ನು ವ್ಯಕ್ತಿಯೊಬ್ಬರು ಪರಿಶೀಲಿಸುತ್ತಿರುವುದು.
ಬೆಂಗಳೂರು: ಹಳೆ ಪತ್ರಿಕೆಗಳನ್ನು, ಹಾಲಿನ ಪ್ಲಾಸ್ಟಿಕ್ ಚೀಲವನ್ನು ಮಾರಾಟ ಮಾಡಿ ಹಣ ಮಾಡುವಂತೆ ನೀವು ಹಸಿ ತ್ಯಾಜ್ಯ ವಸ್ತುಗಳಿಂದ ಕೂಡ ಬೆಂಗಳೂರು ನಗರದಲ್ಲಿ ಹಣ ಸಂಪಾದನೆ ಮಾಡಬಹುದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗೊಬ್ಬರ ಖರೀದಿಸುವ ಕೇಂದ್ರಗಳನ್ನು ಎಲ್ಲಾ 198 ವಾರ್ಡುಗಳಲ್ಲಿ ಸ್ಥಾಪಿಸಲಿದೆ.
ಈ ವರ್ಷದ ಬಜೆಟ್ ನಲ್ಲಿ ಬಿಬಿಎಂಪಿ ಹಸಿ ತ್ಯಾಜ್ಯ ವಸ್ತುಗಳನ್ನು ಗೊಬ್ಬರವನ್ನಾಗಿ ಪರಿವರ್ತಿಸುವುದು ಒಂದು ಪ್ರಮುಖ ಉದ್ದೇಶವಾಗಿದೆ ಎಂದು ಘೋಷಿಸಿದ್ದು, ಅದಕ್ಕಾಗಿ 2 ಕೋಟಿ ರೂಪಾಯಿ ಮೀಸಲಿಟ್ಟಿದೆ.
''ನಾವು ಪ್ರತಿವಾರ ಕಾಂಪೋಸ್ಟ್(ಗೊಬ್ಬರ) ಸಂತೆಯನ್ನು ಆಯೋಜಿಸಲು ಆರಂಭಿಸಿದ್ದೇವೆ. ಸಂಜಯ್ ನಗರ, ಬಿಟಿಎಂ ಲೇ ಔಟ್ ಮತ್ತು ನಂದಿನಿ ಲೇ ಔಟ್ ಸೇರಿದಂತೆ 7 ಸ್ಥಳಗಳಲ್ಲಿ ಸಂತೆಯನ್ನು ಪೂರ್ಣಗೊಳಿಸಿದ್ದೇವೆ. ಇಲ್ಲಿ ನಾವು ನಗರದ ನಾಗರಿಕರಿಗೆ ತ್ಯಾಜ್ಯಗಳಿಂದ ಹೇಗೆ ಗೊಬ್ಬರ ತಯಾರಿಸುವುದೆಂದು ಹೇಳಿಕೊಡುತ್ತೇವೆ. ಕಾಂಪೋಸ್ಟ್ ತಯಾರಿಕೆ ಮಡಿಕೆಗಳು, ಎಲೆಗಳನ್ನು ಪುಡಿ ಮಾಡುವ ಯಂತ್ರಗಳು, ಲಂಬ ಗಾರ್ಡನ್ ಕಿಟ್ ಮತ್ತು ದ್ರವ ಗೊಬ್ಬರ ತಯಾರಿಕಾ ವ್ಯಾಪಾರಿಗಳನ್ನು ಗೊಬ್ಬರ ಸಂತೆಗೆ ಆಹ್ವಾನಿಸುತ್ತೇವೆ.
ಬಿಬಿಎಂಪಿಯ ಘನ ತ್ಯಾಜ್ಯ ನಿರ್ವಹಣೆಯ ಜಂಟಿ ಆಯುಕ್ತ ಸರ್ಫರಾಜ್ ಖಾನ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆಗೆ ಮಾತನಾಡಿ, ಕೃಷಿ ಇಲಾಖೆ ಜೊತೆ ಬಿಬಿಎಂಪಿ ಒಪ್ಪಂದ ಮಾಡಿಕೊಂಡು ಅವರಿಗೆ ಗೊಬ್ಬರ ಪೂರೈಸುತ್ತೇವೆ. ಕಾಂಪೊಸ್ಟ್ ತಯಾರಿಸಲು ಆರಂಭಿಸಿದರೆ ಒಣ ತ್ಯಾಜ್ಯ ಮತ್ತು ಹಸಿ ತ್ಯಾಜ್ಯಗಳನ್ನು ವಿಂಗಡಿಸಲು ಆರಂಭಿಸುತ್ತಾರೆ. ಇದರಿಂದ ಕಸದ ವಿಲೇವಾರಿಯೂ ಸುಲಭವಾಗುತ್ತದೆ. ತ್ಯಾಜ್ಯಗಳ ವಿಲೇವಾರಿಯ ವಿಕೇಂದ್ರಿಕರಣದಿಂದ ನಮ್ಮ ಸಾಗಾಟ ವೆಚ್ಚ ಕೂಡ ಕಡಿಮೆಯಾಗುತ್ತದೆ ಎಂದು ಅವರು ಹೇಳುತ್ತಾರೆ.
ನಾಗರಭಾವಿಯ ನಿವಾಸಿ ಸ್ವರೂಪ ವೆಂಕಟೇಶ್, ಬಿಬಿಎಂಪಿಯ ಈ ಕ್ರಮ ಸ್ವಾಗತಾರ್ಹ. ಬಜೆಟ್ ನಲ್ಲಿ ಘೋಷಿಸಿದಂತೆ ಪ್ರತಿ ಮನೆಗೆ ಎರಡು ಡಸ್ಟ್ ಬಿನ್ ನೀಡುವ ಬದಲು ಕಡಿಮೆ ಬೆಲೆಗೆ ಅಥವಾ ಉಚಿತವಾಗಿ ಕಾಂಪೊಸ್ಟ್ ಮಡಕೆಗಳನ್ನು ಮಾರಾಟ ಮಾಡಬೇಕು ಎಂದು ಹೇಳುತ್ತಾರೆ.
ತ್ಯಾಜ್ಯಗಳನ್ನು ವಿಂಗಡಣೆ ಮಾಡುವುದು ಸುಲಭವಲ್ಲ ಎನ್ನುತ್ತಾರೆ ಹನುಮಂತನಗರದ ವಾಸಿ ಅಂಜಲಿ ಶ್ರೀರಾಮ್. ನಾವು ಸಿಂಗಲ್ ಬೆಡ್ ರೂಂ ಅಪಾರ್ಟ್ ಮೆಂಟ್ ನಲ್ಲಿರುವುದು. ಹಸಿ ತ್ಯಾಜ್ಯಗಳನ್ನು ಹಲವು ದಿನಗಳವರೆಗೆ ಮನೆಯಲ್ಲಿ ಇಟ್ಟು ಕೊಳ್ಳುವುದು ಸುಲಭವಲ್ಲ ಎಂದು ಅವರು ಹೇಳುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos