ರಾಜ್ಯ

ಚಿಕ್ಕಬಳ್ಳಾಪುರ: ದೇವಾಲಯಕ್ಕೆ ಹಾವು ಬಿಟ್ಟು ಭಕ್ತರಿಗೆ ವಂಚಿಸಿದ ಪೂಜಾರಿ ಬಂಧನ

Shilpa D

ಗುಡಿಬಂಡೆ: ದೇವಸ್ಥಾನಕ್ಕೆ ಹಲ್ಲು ಕಿತ್ತ ಹಾವನ್ನು ತಂದು ಬಿಟ್ಟು, ಭಕ್ತರನ್ನು ಸೆಳೆಯಲು ದೇವಿಯ ಮುಂದೆ ನಾಗಮಣಿ  ಇಟ್ಟು ವಂಚಿಸಿದ ಆರೋಪ ಮೇಲೆ ಚಿಕ್ಕಬಳ್ಳಾಪುರ ಗುಡಿಬಂಡೆಯ ದೇವಾಲಯದ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ.

ಗುಡಿಬಂಡೆಯ ಚೌಡೇಶ್ವರಿ ದೇವಾಲಯದ ಅರ್ಚಕ ಪುರುಷೋತ್ತಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲು ಕಿತ್ತ ಹಾವನ್ನು ಗರ್ಭಗುಡಿಗೆ ಬಿಟ್ಟಿದ್ದ ಪುರುಷೋತ್ತಮ್ ದೇವಿಯ ಮುಂದೆ ಹೊಳೆಯುವ ಮಣಿ ಇರಿಸಿ ನಾಗಮಣಿ ಎಂದು ನಂಬಿಸಲು ಮುಂದಾಗಿದ್ದ. ಅಮೆರಿಕನ್ ಡೈಮಂಡ್ ಹರಳಿಗೆ ಬ್ಯಾಟರಿ ಸಂಪರ್ಕ ನೀಡಿ ಬೆಳಕು ಮೂಡುವಂತೆ ಮಾಡಿ, ನಾಗಮಣಿಯ ಹಾಗೆ ಬಿಂಬಿಸಲು ಯತ್ನಿಸಿದ್ದ. ಇದನ್ನು ನಂಬಿದ ಭಕ್ತರು ಬುಧವಾರ ಬೆಳಿಗ್ಗೆಯಿಂದಲೇ ದೇವಾಲಯದ ಬಳಿ ಜಮಾಯಿಸಿದರು.

ದೇವಾಲಯದಲ್ಲಿ ನಾಗರಹಾವು ಕಂಡ ಕೆಲವು ಭಕ್ತರು ಉರಗ ಪ್ರೇಮಿ ಸ್ನೇಕ್‌ ಪೃಥ್ವಿ ಅವರನ್ನು ಕರೆಸಿದರು. ದೇವಾಲಯದಲ್ಲಿ ವಿಸ್ಮಯ ನೋಡಲು ಜನ ಸೇರಿದ್ದರಿಂದ ಪೊಲೀಸರು ಬಂದಿದ್ದರು.

ನಾಗರಹಾವು ಹಿಡಿದು, ಮಣಿಯನ್ನು ಪರೀಕ್ಷಿಸಿದಾಗ ವಂಚನೆ ಬೆಳಕಿಗೆ ಬಂದಿತು. ಪೂಜಾರಿ ಕೂಡ ವಿಚಾರಣೆ ವೇಳೆ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ, ಯುಗಾದಿ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಹಣ ಸಂಪಾದಿಸಲು ಈ ರೀತಿ ವಂಚಿಸಿದ್ದಾಗಿ ಆತ, ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ, ಆತನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ.

SCROLL FOR NEXT