ರಾಜ್ಯ

ಕೆಂಪು ದೀಪ ಹೋಯ್ತು.. ಅವಧಿಯೊಳಗೆ ನಿಯಮ ಪಾಲಿಸಿದ ಬೆಂಗಳೂರು ವಿಐಪಿಗಳು

Sumana Upadhyaya
ಬೆಂಗಳೂರು: ವಿಐಪಿ, ವಿವಿಐಪಿ ವ್ಯಕ್ತಿಗಳು ಬಳಸುವ ಸರ್ಕಾರಿ ಕಾರಿನಿಂದ ಕೆಂಪು ದೀಪ ತೆಗೆಯುವ ಕೇಂದ್ರ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಿನ್ನೆ ಪ್ರಮುಖ ವ್ಯಕ್ತಿಗಳು ಬಳಸುವ ಸರ್ಕಾರಿ ವಾಹನಗಳಿಂದ ಕೆಂಪು ದೀಪವನ್ನು ತೆಗೆಯಲಾಗಿದೆ. 
ಆದರೂ ಕೆಲವು ಸಚಿವರು ಕೆಂಪು ದೀಪ ಹೊಂದಿದ ಕಾರಿನಲ್ಲಿಯೇ ಓಡಾಡುತ್ತಿದ್ದುದು ಕಂಡುಬಂತು. ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಕೆಂಪು ದೀಪದ ಬಳಕೆಯನ್ನು ಮುಂದುವರಿಸಿದ್ದಾರೆ. ಅವರು ನಿನ್ನೆ ಮಂಗಳೂರಿನಲ್ಲಿ ಕೆಂಪು ದೀಪ ಅಳವಡಿಸಿದ ಸರ್ಕಾರಿ ಕಾರಿನಲ್ಲಿ ಓಡಾಡುತ್ತಿದ್ದುದು ಕಂಡುಬಂತು. 
ನಿಷೇಧ ಕಾನೂನು ಜಾರಿಗೆ ಬರುವ ಕೇವಲ ಒಂದು ದಿನ ಮೊದಲು ಮಂಗಳೂರು ಜಿಲ್ಲಾ ಸಚಿವ ಬಿ.ರಮನಾಥ ರೈ, ಮೊನ್ನೆ ಭಾನುವಾರ ತಮ್ಮ ಕಾರಿನಿಂದ ಕೆಂಪು ದೀಪ ತೆಗೆಸಿದ್ದರು. ಕೆಲ ದಿನಗಳ ಹಿಂದೆ ತಮಗೆ ಆದೇಶ ಪ್ರತಿ ಬರುವವರೆಗೆ ಕೆಂಪು ದೀಪ ತೆಗೆಸುವುದಿಲ್ಲ ಎಂದು ಹೇಳಿದ್ದರು.
ನಿನ್ನೆ ಕಾನೂನು ಜಾರಿಗೆ ಬಂದಾಗ ಬೆಂಗಳೂರಿನ ವಿಧಾನ ಸೌಧದ ಹೊರಗೆ ನಿಂತಿದ್ದ ಯಾವುದೇ ಕಾರಿನಲ್ಲಿ ಕೆಂಪು ದೀಪ ಇರಲಿಲ್ಲ.
ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನಿಂದ ಕೆಂಪು ದೀಪವನ್ನು ತೆಗೆಯಲಾಗಿತ್ತು. ಈ ಮೂಲಕ ಸಚಿವರು, ಅಧಿಕಾರಿಗಳು ಮತ್ತು ರಾಜಕೀಯ ನಾಯಕರಿಗೆ ಮಾದರಿಯಾದರು.
ಕೇಂದ್ರ ಸರ್ಕಾರದ ನಿಯಮದ ಬಗ್ಗೆ ಸ್ಪಷ್ಟತೆಯಿಲ್ಲ. ಆದರೆ ಮುಖ್ಯಮಂತ್ರಿಯವರೇ ತಮ್ಮ ಕಾರಿನಿಂದ ಕೆಂಪು ದೀಪ ತೆಗೆಸಿರುವಾಗ ನಾವು ಆಕ್ಷೇಪ ಹೇಳಲು ಹೇಗೆ ಸಾಧ್ಯ? ಎಂದು ಹಿರಿಯ ಅಧಿಕಾರಿಯೊಬ್ಬರು ಕೇಳುತ್ತಾರೆ. ನಗರದಲ್ಲಿ ಕೆಲವು ಗಸ್ತು ತಿರುಗುವ ವಾಹನಗಳು ಅಂಬರ್ ಬೀಕನ್ ದೀಪಗಳನ್ನು ಬಳಸುವುದು ಕಂಡುಬಂತು.
SCROLL FOR NEXT