ಬೆಂಗಳೂರು: ರಾಜ್ಯದ ಸಿನಿಮಾ ಅಭಿಮಾನಿಗಳಿಗೆ ಗುಡ್ ನ್ಯೂಸ್. ಕೊನೆಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಗರಿಷ್ಟ ಟಿಕೆಟ್ ದರ 200 ರೂ. ಫಿಕ್ಸ್ ಆಗಿದ್ದು, ಇಂದಿನಿಂದಲೇ ಅಧಿಕೃತ ಆದೇಶ ಜಾರಿಯಾಗಿದೆ. ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆಯಿಂದ ಆದೇಶ ಪ್ರಕಟವಾಗಿದ್ದು, ಎಲ್ಲ ಭಾಷೆಯ ಚಿತ್ರಗಳಿಗೆ ಇದು ಅನ್ವಯವಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಮಲ್ಪಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೆ 200 ರೂ. ದರ ನಿಗದಿಪಡಿಸಲು ಕ್ರಮ ಕೈಗೊಳ್ಳುವುದಾಗಿ ಪ್ರಕಟಿಸಿದ್ದರು. ಅದರಂತೆ ಇದೀಗ ಸಿಎಂ ಆದೇಶಕ್ಕೆ ಹಣಕಾಸು ಇಲಾಖೆ ಅನುಮೋದನೆ ಸಿಕ್ಕಿದ್ದ ಹಿನ್ನೆಲೆಯಲ್ಲಿ ಅಧಿಕೃತವಾಗಿ ಅಧಿಸೂಚನೆ ಹೊರಬಿದ್ದಿದೆ.
ಮಲ್ಟಿಪ್ಲೆಕ್ಸ್ ಗಳ ಪ್ರಮುಖ ಅವಧಿಯಲ್ಲಿ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಚಿತ್ರವನ್ನು ಒಂದು ಪರದೆಯಲ್ಲಿ ಮಧ್ಯಾಹ್ನ 1.30 ರಿಂದ ಸಂಜೆ 7.30 ರವರೆಗಿನ ಪ್ರಮುಖ ಅವಧಿಯಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಉಲ್ಲೇಖಿಸಲಾಗಿದೆ.
ಐ-ಮ್ಯಾಕ್ಸ್, 4ಡಿಎಕ್ಸ್ ಚಿತ್ರಮಂದಿರಗಳಗೆ ಈ ಆದೇಶ ಅನ್ವಯವಾಗುವುದಿಲ್ಲ. ಜೊತೆಗೆ ಗೋಲ್ಡ್ ಕ್ಲಾಸ್ ಗೂ ಈ ಆದೇಶ ಅನ್ವಯವಾಗುವುದಿಲ್ಲ. ಆದರೆ ಪ್ರತಿ ಚಿತ್ರಮಂದಿರದಲ್ಲೂ ಗೋಲ್ಡ್ ಕ್ಲಾಸ್ ಶೇ.10 ರಷ್ಟು ಸೀಟುಗಳನ್ನು ಮೀರಬಾರದು ಎನ್ನುವ ಅಂಶ ಆದೇಶದಲ್ಲಿದೆ.