ರಾಜ್ಯ ಸರ್ಕಾರದ ವಿರುದ್ಧ ಬಸವಣ್ಣ ಚಿತ್ರ ಕಲಾವಿದ ಕಾಳೆ ಅಸಮಾಧಾನ
ಬಳ್ಳಾರಿ: 12 ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಚಿತ್ರವನ್ನು ಸರ್ಕಾರಿ ಕಚೇರಿಗಳಲ್ಲಿ ಹಾಕುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರ ಆಯ್ಕೆ ಮಾಡಿರುವ ಬಸವಣ್ಣನವರ ಚಿತ್ರ ರಚನೆ ಮಾಡಿದ ಚಿತ್ರ ಕಲಾವಿದ ಟಿವಿ ಕಾಳೆ ತಮ್ಮ ಹೆಸರನ್ನು ಉಲ್ಲೇಖಿಸದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2005 ರಲ್ಲಿ ವಿಟಿ ಕಾಳೆ ಬಸವಣ್ಣನವರ ಚಿತ್ರವನ್ನು ಬರೆದಿದ್ದರು. ಸರ್ಕಾರಿ ಕಚೇರಿಗಳಲ್ಲಿ ಹಾಕುವುದಕ್ಕೆ ರಾಜ್ಯ ಸರ್ಕಾರ ಕಾಳೆ ಅವರು ಚಿತ್ರಿಸಿದ್ದ ಚಿತ್ರವನ್ನೇ ಆಯ್ಕೆ ಮಾಡಿತ್ತು. ಅಷ್ಟೇ ಅಲ್ಲದೇ ಆದೇಶ ಹೊರಡಿಸುವುದಕ್ಕೂ ಮುನ್ನ ಕಾಳೆ ಅವರಿಗೆ ಧನ್ಯವಾದ ತಿಳಿಸಲು ಸಂಡೂರಿನ ಅವರ ನಿವಾಸಕ್ಕೆ ಅಧಿಕಾರಿಗಳೂ ಭೇಟಿ ನೀಡಿದ್ದರು. ಸರ್ಕಾರ ತಾವು ರಚಿಸಿರುವ ಚಿತ್ರವನ್ನು ಆಯ್ಕೆ ಮಾಡಿರುವುದಕ್ಕೆ ಕಾಳೆ ಸಂತಸ ವ್ಯಕ್ತಪಡಿಸಿದ್ದಾರಾದರೂ, ಅಧಿಕೃತ ಆದೇಶದಲ್ಲಿ ಚಿತ್ರ ರಚಿಸಿದರ ಹೆಸರನ್ನು ಉಲ್ಲೇಖಿಸದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಉಪನಿರ್ದೇಶಕ ರಾಮಲಿಂಗಪ್ಪ ಬಿಕೆ, ವಿಟಿ ಕಾಳೆ ಅವರ ನಿವಾಸಕ್ಕೆ ಭೇಟಿ ನೀಡಿ ಧನ್ಯವಾದ ತಿಳಿಸಿದ್ದರು. ಕಾಳೆ ಅವರು ಅಸಮಾಧಾನ ವ್ಯಕ್ತಪಡಿಸಿರುವ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ರಾಮಲಿಂಗಪ್ಪ ಬಿಕೆ ತಿಳಿಸಿದ್ದಾರೆ.
ಕಾಳೆ ಅವರು ಈ ಚಿತ್ರ ರಚಿಸುವುದಕ್ಕೂ ಮುನ್ನ ಬಸವಣ್ಣನವರು ಕಿರೀಟ ಧರಿಸಿ ಕುಳಿತಿರುವ ಚಿತ್ರವನ್ನೇ ಸಾಮಾನ್ಯವಾಗಿ ಬಳಕೆ ಮಾಡಲಾಗುತ್ತಿತ್ತು. ಸ್ವಾಮಿಜಿಯವರು ನಿಜವಾದ ಬಸವಣ್ಣ ಹೇಗಿದ್ದರೋ ಅದೇ ರೀತಿಯಲ್ಲಿ ಚಿತ್ರ ರಚಿಸುವಂತೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಬಸವಣ್ಣನವರ ನಿಜವಾದ ಶೈಲಿಯ ಚಿತ್ರವನ್ನು ರಚಿಸಿದ್ದಾಗಿ ಕಾಳೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics