ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್
ಬೆಂಗಳೂರು: ರಾಷ್ಟ್ರವ್ಯಾಪಿ ಸುಮಾರು 1.6 ಲಕ್ಷ ನಕಲಿ ಅಂಕಪಟ್ಟಿ ಅಥವಾ ಪ್ರಮಾಣಪತ್ರ ದಂಧೆಯನ್ನು ಬಯಲು ಮಾಡಿರುವ ಬೆಂಗಳೂರು ನಗರ ಪೊಲೀಸ್ ನ ಕೇಂದ್ರ ಅಪರಾಧ ವಿಭಾಗದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ನಕಲಿ ಅಂಕಪಟ್ಟಿ ದಂಧೆ ನಡೆಸುತ್ತಿದ್ದ ಕುನಲ್ ಕುಮಾರ್ ಮೊಂಡಲ್ ಎಂಬಾತನನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದಾಗ ಇತರ ಮೂವರು ಕೂಡ ಸಿಕ್ಕಿದರು ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಯ ಮಾಹಿತಿ ಮೇರೆಗೆ ಪೊಲೀಸರು ಸಂದೇಶ್ ಅಗರ್ವಾಲ್, ದೀಪಾಂಕರ್ ಸೇನ್, ಸೌರವ್ ಕುಮಾರ್ ಶರ್ಮ ಮತ್ತು ಅರುಣಾ ಅವರನ್ನು ಬಂಧಿಸಿದ್ದಾರೆ.
ಸಂದೇಶ್ ಅಗರ್ವಾಲ್ ದೆಹಲಿಯಲ್ಲಿ ಕಲ್ಸಲ್ಟೆನ್ಸಿಯೊಂದನ್ನು ನಡೆಸುತ್ತಿದ್ದು ದೀಪಾಂಕರ್ ಸೇನ್ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಸಿಬ್ಬಂದಿಯಾಗಿದ್ದನು. ಸೌರವ್ ಕುಮಾರ್ ಗಜಿಯಾಬಾದ್ ನಲ್ಲಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದು ಅರುಣಾ ಫಾರ್ಚುನ್ ಸಂಸ್ಥೆ ನಡೆಸುತ್ತಿದ್ದನು. ಕುನಲ್ ಬೆಂಗಳೂರಿನಲ್ಲಿ ಜ್ಯಾನಸ್ ಕಲ್ಸಲ್ಟೆನ್ಸಿ ನಡೆಸುತ್ತಿದ್ದಾನೆ.
2011ರಿಂದ ಮಾನ್ಯತಾ ಟೆಕ್ ಪಾರ್ಕ್ ಬಳಿ ವಾಸಿಸುತ್ತಿದ್ದ ಬಿಹಾರ ಮೂಲದ ಕುನಲ್ ಕುಮಾರ್ ನನ್ನು ಬಂಧಿಸಿದ ನಂತರ ಪೊಲೀಸರು ಇತರ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು. ಕುನಲ್ ದೀಪಾಂಕರ ಸೇನ್ ಜೊತೆ ಸಂಪರ್ಕದಲ್ಲಿದ್ದನು. ತನಿಖೆ ವೇಳೆ ಗೌರವ್ ಕುಮಾರ್ ಎಂಬಾತನಿಂದ ನಕಲಿ ಅಂಕಪಟ್ಟಿ ಪಡೆಯುತ್ತಿದ್ದುದಾಗಿ ತಿಳಿಸಿದ್ದಾನೆ.
ಪೊಲೀಸರು ನಂತರ ಹುಡುಕಾಟ ನಡೆಸಿ ಗಜಿಯಾಬಾದ್ ನಲ್ಲಿ ಗೌರವ್ ಕುಮಾರ್ ನನ್ನು ಬಂಧಿಸಿದರು. ಆತನ ನಿಜವಾದ ಹೆಸರು ಸೌರವ್ ಕುಮಾರ್ ಶರ್ಮ. ಶರ್ಮನ ಮೂಲಕ ದಂಧೆಯ ಪ್ರಮುಖ ರೂವಾರಿ ಸಂದೇಶ್ ನ ಮಾಹಿತಿ ಸಿಕ್ಕಿತು.
ಸಂದೇಶ್ ನ ದೆಹಲಿ ಮೂಲದ ಕನ್ಸಲ್ಟೆನ್ಸಿ ದೇಶಾದ್ಯಂತ ಸುಮಾರು 180 ಶಾಖೆಗಳನ್ನು ಹೊಂದಿವೆ. ಆರೋಪಿ ಸುಮಾರು 1.6 ಲಕ್ಷ ಅಂಕಪಟ್ಟಿಗಳನ್ನು ಕಳೆದ 8 ವರ್ಷಗಳಲ್ಲಿ ಮುದ್ರಿಸಿ ಹಲವು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ.
ಆತನ ಕಚೇರಿಗೆ ದಾಳಿ ನಡೆಸಿದಾಗ 732 ಮುದ್ರಿತ ಅಂಕಪಟ್ಟಿಗಳು, 836 ಖಾಲಿ ಅಂಕಪಟ್ಟಿಗಳು ದೊರಕಿವೆ ಎಂದು ಪ್ರವೀಣ್ ಸೂದ್ ತಿಳಿಸಿದರು.
ಎಂಜಿನಿಯರಿಂಗ್, ಕಲೆ, ವಿಜ್ಞಾನ, ವೈದ್ಯಕೀಯ ಶಾಸ್ತ್ರ ಇತ್ಯಾದಿ ವಿಷಯಗಳಿಗೆ ಸಂಬಂಧಪಟ್ಟ ನಕಲಿ ಅಂಕಪಟ್ಟಿಗಳನ್ನು ಆರೋಪಿಗಳು ಪೂರೈಸುತ್ತಿದ್ದರು. ದೇಶದ ವಿವಿಧ ಕಡೆ ವಿಶ್ವವಿದ್ಯಾಲಯ ಡಾಕ್ಟರೇಟ್ ಸರ್ಟಿಫಿಕೇಟ್ ಗಳನ್ನು ಸಹ ನೀಡುತ್ತಿದ್ದರು. ಇದರಲ್ಲಿ ಒಂದು ಲಕ್ಷಕ್ಕೂ ಅಧಿಕ ವೈದ್ಯರು, ಎಂಜಿನಿಯರ್ ಗಳು ಮತ್ತು ಇತರ ವೃತ್ತಿಪರರು ದಂಧೆಯಲ್ಲಿ ತೊಡಗಿದ್ದಾರೆ ಎಂದು ಪ್ರವೀಣ್ ಸೂದ್ ವಿವರಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos