ಬಿಸಿಯಾಗುತ್ತಿರುವ ಸ್ಟೇರ್ ಕೇಸ್
ಬೆಳಗಾವಿ: ಹೊಸದಾಗಿ ಕಟ್ಟಿದ ಮನೆಯ ಸ್ಟೇರ್ ಕೇಸ್ ಇದ್ದಕ್ಕಿದ್ದಂತೆ ಬಿಸಿಯಾಗುತ್ತಿದ್ದು, ಮನೆ ಮಂದಿ ವಾಸಿಸಲು ಹೆದರಿ ಅಲ್ಲಿಂದ ಬೇರೆಡೆ ಸ್ಥಳಾಂತರಗೊಂಡಿದ್ದಾರೆ.
ಬೆಳಗಾವಿ ನಗರದಿಂದ 15 ಕಿ.ಮೀ ದೂರದಲ್ಲಿರುವ ಹಂಗಾರ್ಗ ಎಂಬ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ಮನೆ ಕಟ್ಟಲಾಗುತ್ತಿತ್ತು, ಕಟ್ಟಡ ಕೆಲಸ ಸಂಪೂರ್ಣವಾಗಿ ಇತ್ತೀಚೆಗಷ್ಟೆ ಕಾಂಬ್ಳೆ ಕುಟುಂಬದವರು ಹೊಸ ಮನೆಗೆ ಶಿಫ್ಟ್ ಆಗಿದ್ದರು.
ಆದರೆ ಕಳೆದ ಕೆಲ ದಿನಗಳಿಂದ ಸ್ಟೇರ್ ಕೇಸ್ ನ ಮೊದಲ ಹಂತದಲ್ಲಿ ಬಿಸಿ ಗಾಳಿ ಬರುತ್ತಿರುವುದು ಕುಟುಂಬ ಸದಸ್ಯರ ಅನುಭವಕ್ಕೆ ಬಂದಿದೆ. ಹೀಗಾಗಿ ಹೆದರಿದ ಕಟುಂಬಸ್ಥರು ಮನೆಯ ಒಳಗೆ ಇರಲು ಹೆದರಿ ಮನೆಯ ಹೊರಗೆ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದಾರೆ.
ಮನೆ ಮಾಲೀಕರಾದ ತುಕರಾಮ್ ಮತ್ತು ಭೀಮಪ್ಪ ಕಾಂಬ್ಳೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ತಮ್ಮ ಮನೆಯಲ್ಲಿ ಆಗುತ್ತಿರುವ ಘಟನೆ ಬಗ್ಗೆ ಹೇಳಿದ್ದಾರೆ. ಇದನ್ನು ತಿಳಿದ ಗ್ರಾಮದ ಹಲವು ಮಂದಿ ಬಿಸಿಗಾಳಿ ಬರುತ್ತಿರುನ ಸ್ಟೇರ್ ಕೇಸ್ ನೋಡಲು ತಂಡೋಪತಂಡವಾಗಿ ಬರುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ನಡೆಯುವ ದುರಂತವನ್ನು ಸೂಚಿಸುತ್ತಿದೆ ಎಂದು ಕೆಲವರು ಹೇಳಿದ್ದಾರೆ. ಇದರ ಕೆಳಗೆ ಅಡಗಿಸಿಟ್ಟಿರುವ ನಿಧಿಯಿದೆ, ಅದರ ಸಂಕೇತವಾಗಿ ಸ್ಟೇರ್ ಕೇಸ್ ಬಿಸಿಯಾಗಿದೆ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಮತ್ತೆ ಕೆಲವರು ಸ್ಟೇರ್ ಕೇಸ್ ಕೆಳಗೆ ಲಾವಾರಸ ತುಂಬಿದೆ ಹೀಗಾಗಿ ಅದು ಬಿಸಿಯಾಗುತ್ತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಸ್ಥಳಕ್ಕೆ ಬಂದ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಟೇರ್ ಕೇಸ್ ಪಾಯವನ್ನು ಕೊರೆದು ಅಲ್ಲಿಂದ ಮಣ್ಣು ತೆಗೆದುಕೊಂಡು ಪರೀಕ್ಷೆಗೆ ಕಳುಹಿಸಿದ್ದಾರೆ. ಪರಿಶೀಲನೆ ನಂತರ ಬಿಸಿಗೆ ಕಾರಣ ಏನು ಎಂಬುದು ತಿಳಿದು ಬರಲಿದೆ.
ವಿದ್ಯುತ್ ಸೋರಿಕೆಯಿಂದಾಗಿ ಆ ಭಾಗ ಮಾತ್ರ ಬಿಸಿಯಾಗುತ್ತಿರಬಹುದು ಎಂದು ಸಿವಿಲ್ ಎಂಜಿನೀಯರ್ ಸುಬಾಷ್ ಹುಬಾಳ್ಕರ್ ಹೇಳಿದ್ದಾರೆ, ಕೆಲ ವರ್ಷಗಳ ಹಿಂದೆ ತಮ್ಮ ಸ್ವಂತ ಮನೆಯಲ್ಲಿ ಇದೇ ರೀತಿಯ ಸಮಸ್ಯೆ ಉಂಟಾಗಿತ್ತು ಎಂದು ಹೇಳಿದ್ದಾರೆ. ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಪರೀಕ್ಷೆಗಾಗಿ ಮಣ್ಣು ತೆಗೆದು ಕೊಂಡು ಹೋಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.