ಬೆಂಗಳೂರು: ದುಬೈ ಪ್ರವಾಸ ಮುಗಿಸಿ ನಗರಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಲ್ಲಿನ ನೀರಿನ ವೈಜ್ಞಾನಿಕ ನಿರ್ವಹಣೆಯನ್ನು ಕೊಂಡಾಡಿದ್ದು, ನೀರು ನಿರ್ವಹಣೆ ಕುರಿತಂತೆ ದುಬೈನಿಂದ ಕಲಿಯಿರಿ ಎಂದು ಹೇಳಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಆಯೋಜಿಸಲಾಗಿದ್ದ 2016ನೇ ಸಾಲಿನ ಎಸ್ ಜಿ ಬಾಳೇಕುಂದ್ರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ನೀರನ್ನು ಹೇಗೆ ನಿರ್ವಹಣೆ ಮಾಡಬೇಕೆಂಬುದನ್ನು ನಾವು ಮರಳುಗಾಡುಗಳುಳ್ಳ ದೇಶಗಳಾದ ಇಸ್ರೇಲ್, ದುಬೈ ಮುಂತಾದ ದೇಶಗಳ ಕಡೆ ಹೋಗಿ ನೋಡಬೇಕು. ಅಂಥ ಬೆಂಗಾಡಿನಲ್ಲೂ ಹಸಿರು ಉಕ್ಕುವಂತೆ ಮಾಡಿದ್ದಾರೆಂದು ಹೇಳಿದ್ದಾರೆ.
ಇಂಜಿನಿಯರ್ ಗಳು ಯೋಜನೆ ರೂಪಿಸುವಾದ ಅವುಗಳ ವೆಚ್ಚಗಳು ಅಂದಾಜು ನಿಖರವಾಗಿರಬೇಕು. ನಗರ ಪ್ರದಕ್ಷಿಣೆ ವೇಳೆ ಯೋಜನೆ ಪೂರ್ಣಗೊಳಿಸಲು ಅಂದಾಜು ವೆಚ್ಚ ಎಷ್ಟಾಗಬಹುದು ಎಂದು ಜಲ ಸಂಪನ್ಮೂಲ ಇಲಾಖೆ ಇಂಜಿನಿಯರ್ ಗಳನ್ನು ಕೇಳಿದ್ದೆ. ಈ ವೇಳೆ ಅವರು ರೂ.50,000 ಕೋಟಿ ಆಗುತ್ತದೆ ಎಂದು ಹೇಳಿದ್ದರು.
ಕಳೆದ ನಾಲ್ಕು ವರ್ಷದಲ್ಲಿ ನಾವು ಯೋಜನೆಗೆ ರೂ.45,000 ಕೋಟಿ ಖರ್ಚು ಮಾಡಿದ್ದೇವೆ. ಆರ್ಥಿಕ ವರ್ಷದಲ್ಲಿ ರೂ.16,000 ಕೋಟಿ ಖರ್ಚು ಮಾಡಿದ್ದೇವೆ. ಇಂಜಿನಿಯರ್ ಗಳು ಹೇಳಿದ್ದಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಅಲ್ಲದೆ, ನಿಗದಿ ಪಡಿಸಲಾದ ಸಮಯದೊಳಗೆ ಯೋಜನೆಯನ್ನು ಪೂರ್ಣಗೊಳಿಸುವಂತೆ ಇಂಜಿನಿಯರ್ ಗಳಿಗೆ ಸೂಚನೆ ನೀಡಿದ್ದಾರೆ.