ರಾಜ್ಯ

ನೀರಿನ ಕೊರತೆ: ವಿಜಯಪುರ ಮಹಿಳಾ ವಿವಿ 3 ದಿನಗಳ ಕಾಲ ಬಂದ್

Srinivas Rao BV
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ನೀರಿಗೆ ಬರ ಉಂಟಾಗಿರುವ ಪರಿಣಾಮ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ.ವನ್ನು 3 ದಿನಗಳ ಕಾಲ ಬಂದ್ ಮಾಡಲಾಗಿದೆ. 
ಹಾಸ್ಟೆಲ್ ಗಳಲ್ಲಿರುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸಾಧ್ಯವಾದಷ್ಟೂ ಶೀಘ್ರವಾಗಿ ಹಾಸ್ಟೆಲ್ ನಿಂದ ಜಾಗ ಖಾಲಿ ಮಾಡುವಂತೆ ವಿವಿ ಸೂಚನೆ ನೀಡಿದೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸುತ್ತೋಲೆ ಹೊರಡಿಸಲಾಗಿದ್ದು, ತಮ್ಮ ಮನೆಗಳಿಗೆ ತೆರಳಬೇಕೆಂದು ಸುತೋಲೆಯಲ್ಲಿ ಸೂಚನೆ ನೀಡಲಾಗಿದೆ. 
ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ನೀರಿನ ಕೊರತೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಈ ಸುತ್ತೋಲೆ ಹೊರಡಿಸಲಾಗಿದೆ ಎಂದು ವಿಶ್ವವಿದ್ಯಾನಿಲಯ ಸ್ಪಷ್ಟನೆ ನೀಡಿದೆ. ಆಲಮಟ್ಟಿ ಜಲಾಶಯದಲ್ಲಿನ ನೀರು ಡೆಡ್ ಸ್ಟೋರೇಜ್ ಮಟ್ಟ ತಲುಪಿರುವುದರಿಂದ ವಿಜಯಪುರ ಜಿಲ್ಲೆಗೆ ನೀರಿನ ಕೊರತೆ ಎದುರಾಗಿದೆ. 
ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಇದೇ ಜಿಲ್ಲೆಯವರಾಗಿದ್ದು, ಬೇಸಿಗೆಗೆ ಸಾಕಾಗುವಷ್ಟು ನೀರು ಇದೆ ಎಂದು ಹೇಳುತ್ತಿದ್ದಾರೆ. ಆದರೆ ವಾಸ್ತವಾಂಶ ಬೇರೆಯದ್ದೇ ಇದ್ದು, 700 ವಿದ್ಯಾರ್ಥಿನಿಯರು ಹಾಗು ಬೋಧಕ ವರ್ಗ ಇರುವ ವಿಶ್ವವಿದ್ಯಾನಿಲಯ ಕ್ಯಾಂಪಸ್ ಗೆ ನೀರು ಪೂರೈಕೆಯಾಗುತ್ತಿಲ್ಲ. ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ ಎಂದು ವಿವಿ ಅಧಿಕಾರಿಯೊಬ್ಬರು ಹೇಳಿದ್ದಾರೆ. 
SCROLL FOR NEXT