ಬೆಂಗಳೂರು: ಮುಂದಿನ ವಾರ ರಾಜ್ಯದ ಪರ ವಕೀಲ ಪಾಲಿ ನಾರಿಮನ್ ಅವರನ್ನ ಭೇಟಿ ಮಾಡಿ ಸಲಹೆ ಪಡೆದ ಬಳಿಕ ಮುಂದಿನ ಹೆಜ್ಜೆ ಇಡಲು ನಿರ್ಧರಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಾವೇರಿ ಕೊಳ್ಳದ ನಿರ್ವಹಣೆಗೆ ಪರಿಣತರ ತಂಡ ರಚಿಸುವ ಕುರಿತು ರಾಜ್ಯದ ವಕೀಲ ಫಾಲಿ ಎಸ್. ನಾರಿಮನ್ ಅವರನ್ನು ಮುಂದಿನ ವಾರ ಭೇಟಿ ಮಾಡಲು ಮಂಗಳವಾರ ನಡೆದ ವಿಧಾನಮಂಡಲದ ಉಭಯ ಸದನಗಳ ಸರ್ವ ಪಕ್ಷ ನಾಯಕರ ಸಭೆ ಒಮ್ಮತದ ತೀರ್ಮಾನ ಕೈಗೊಂಡಿದೆ.
ಪರಿಣತರ ತಂಡ ರಚಿಸುವ ಬಗ್ಗೆ ರಾಜ್ಯದ ಅಭಿಪ್ರಾಯ ಅಥವಾ ಒಪ್ಪಿಗೆ ನೀಡುವಂತೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಪತ್ರ ಬರೆದಿತ್ತು ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ನಾರಿಮನ್ ಅವರನ್ನು ಮುಂದಿನ ವಾರ ಭೇಟಿ ಮಾಡಿ ಚರ್ಚಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಸರ್ಕಾರ ನಂತರ ಸೂಕ್ತ ನಿಲುವು ತೆಗೆದುಕೊಳ್ಳಲಿದೆ ಎಂದು ತಿಳಿಸಿದರು. ಪರಿಣತರ ತಂಡ ರಚನೆಯಿಂದಾಗುವ ಸಾಧಕ– ಬಾಧಕ, ಇದರಿಂದ ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ವಿಶೇಷ ಮೇಲ್ಮನವಿ ಮೇಲೆ ಆಗಲಿರುವ ಪರಿಣಾಮದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ವಿವರಿಸಿದರು.
ಇದಕ್ಕೆ ಮುನ್ನ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ತಜ್ಞರು, ಸದನ ನಾಯಕರು ಹಾಗೂ ಈ ವಿಷಯದಲ್ಲಿ ಹೆಚ್ಚಿನ ತಿಳಿವಳಿಕೆ ಇರುವ ಎಚ್.ಡಿ. ದೇವೇಗೌಡರ ಸಲಹೆ ಆಧರಿಸಿ ಮುಂದಿನ ಹೆಜ್ಜೆ ಇಡಲಾಗುವುದು’ ಎಂದು ಹೇಳಿದರು.