ಬೆಂಗಳೂರು: ಕಳೆದ ವಾರ ಸಂಪಿಗೆಹಳ್ಳಿ ಸಮೀಪದ ಹೆಗಡೆನಗರದಲ್ಲಿ ಹಲ್ಲೆಗೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಬಿಜೆಪಿ ಕಾರ್ಯಕರ್ತ ಹುಸೇನ್ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ನಾಗವಾರ ನಿವಾಸಿಯಾಗಿದ್ದ ಹುಸೇನ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದರು.ಜೊತೆಗೆ ಎಜಿಬಿಎಸ್ ಗ್ಯಾಸ್ ಎಜೆನ್ಸಿ ಕೂಡ ನಡೆಸುತ್ತಿದ್ದರು.
ಹಲ್ಲೆ ನಡೆದ ಎರಡು ದಿನಗಳ ನಂತರ ಸಂಪಿಗೆಹಳ್ಳಿ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಸರ್ಫಾರಾಜ್, ಆರ್ಮಾನ್ ಅಲಿ, ನಯಾಜ್ ಮತ್ತು ಇಮ್ರಾನ್ ಎಂಬುವರು ಸೇರಿದಂತೆ ಒಟ್ಟು 11 ಮಂದಿಯನ್ನು ಬಂಧಿಸಿದ್ದರು.
ಮೇ 3ರಂದು ಹುಸೇನ್ ಕಚೇರಿಗೆ ಬಂದ ಇಬ್ಬರು ರಿಯಲ್ ಎಸ್ಟೇಟ್ ವಿಚಾರ ಸಂಬಂಧ ಮಾತನಾಡಲು ಬಂದಿರುವುದಾಗಿ ಹೇಳಿದರು. ಇದನ್ನು ನಂಬಿದ ವಾಚ್ ಮನ್ ಅವರನ್ನು ಒಳಗೆ ಬಿಟ್ಟಿದ್ದ. ಈ ವೇಳೆ ಟೀ ತರುವಂತೆ ಹೇಳಿ ಹುಸೇನ್ ವಾಚ್ ಮನ್ ನನ್ನು ಹೊರಗಡೆ ಕಳುಹಿಸಿದ್ದರು. ಹುಸೇನ್ ಮುಖಕ್ಕೆ ಬಟ್ಟೆ ಸುತ್ತಿದ ಇಬ್ಬರು ಆರೋಪಿಗಳು ಹುಸೇನ್ ಗೆ ಚಾಕುವಿನಿಂದ ಚುಚ್ಚಿ ಅಲ್ಲಿಂದ ಪರಾರಿಯಾಗಿದ್ದರು.
ವಾಚ್ ಮನ್ ಟೀ ತೆಗೆದುಕೊಂಡು ವಾಪಸ್ ಬರುವ ವೇಳೆಗೆ ಇಬ್ಬರು ಓಡಿ ಹೋಗುತ್ತಿದ್ದರು, ಇದನ್ನು ನೋಡಿದ ಆತ ಕೊಠಡಿಗೆ ಬಂದು ನೋಡುವ ವೇಳೆಗೆ ಹುಸೇನ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು, ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು, ನಂತರ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics