ಬೆಂಗಳೂರು: ಇತ್ತೀಚೆಗಷ್ಟೇ ಹಲವು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿದ್ದ ಎಸಿಬಿ ಎಸ್ಪಿ ಗಿರೀಶ್ ಅವರನ್ನು ಸರ್ಕಾರ ಎತ್ತಂಗಡಿ ಮಾಡಿದೆ.
ಗಿರೀಶ್ ಎಸಿಬಿ ಎಸ್ಪಿ ಆಗಿ ಅಧಿಕಾರ ವಹಿಸಿಕೊಂಡ ನಂತರ ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದು ಹಲವು ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸಿದ್ದರು. ಇತ್ತೀಚೆಗಷ್ಟೇ ಬಿಬಿಎಂಪಿ ಪೂರ್ವವಲಯದ ಹೆಚ್ಚುವರಿ ಆಯುಕ್ತ ಯತೀಶ್ ಕುಮಾರ್ ಮನೆ ಮೇಲೆ ದಾಳಿ ಮಾಡಿದ್ದರು.
ಎಸಿಬಿ ದಾಳಿಯಲ್ಲಿ ಪ್ರಮುಖವಾಗಿ ಕಾರ್ಪೋರೇಟರ್ ಕೃಷ್ಣಮೂರ್ತಿ, ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಯೋಜನಾಧಿಕಾರಿ ಎಸ್ಸಿ ಜಯಚಂದ್ರ ಅವರ ಮನೆ ಮೇಲೂ ದಾಳಿ ಮಾಡಲಾಗಿತ್ತು. ಇದರಿಂದಾಗಿ ಗಿರೀಶ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ ಎನ್ನಲಾಗುತ್ತಿದೆ.
ಎಸ್ ಗಿರೀಶ್ ಅವರು ಅಧಿಕಾರ ವಹಿಸಿಕೊಂಡ ಐದೇ ತಿಂಗಳಲ್ಲಿ ಅವರನ್ನು ಆಡಳಿತ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದ್ದು ಅವರ ಸ್ಥಾನಕ್ಕೆ ಟಿಡಿ ಪವಾರ್ ರನ್ನು ನೇಮಕ ಮಾಡಲಾಗಿದೆ.