ಬೆಂಗಳೂರು: ಬ್ಲಾಕ್ ಆ್ಯಂಡ್ ವೈಟ್ ದಂಧೆ ಪ್ರಕರಣ ಆರೋಪದ ಮೇರೆಗೆ ಬಂಧಿರಾಗಿರುವ ರೌಡಿಶೀಟರ್ ನಾಗರಾಜ್ ಹಾಗೂ ಆತನ ಇಬ್ಬರು ಮಕ್ಕಳು ಈ ತಿಂಗಳ 22ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿ 11ನೇ ಎಸಿಎಂಎಂ ನ್ಯಾಯಾಲಯವು ಆದೇಶಿಸಿದೆ.
ಗುರುವಾರಷ್ಟೇ ರೌಡಿಶೀಟರ್ ನಾಗನ ಇಬ್ಬರು ಮಕ್ಕಳನ್ನು ಬಂಧನಕ್ಕೊಳಪಡಿಸಲಾಗಿತ್ತು. ಶುಕ್ರವಾರ ಮಧ್ಯಾಹ್ನ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು, ಪ್ರಕರಣದ ಹೆಚ್ಚಿನ ತನಿಖೆ ನಡೆಸುವ ಸಲುವಾಗಿ ಬಂಧಿತರನ್ನು ವಶಕ್ಕೆ ನೀಡುವಂತೆ ನ್ಯಾಯಾಲಯದ ಮುಂದೆ ಮನವಿ ಮಾಡಿದರು.
ಇದಕ್ಕೆ ಸ್ಪಂದನೆ ನೀಡಿದ ನ್ಯಾಯಾಲಯ, ನಾಗರಾಜ್ ಹಾಗೂ ಆತನ ಉಬ್ಬರು ಪುತ್ರರು ಸೇರಿದಂದೆ ಒಟ್ಟು ಐವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ನಾಗರಾಜ್ ಮನೆಯಲ್ಲಿ ಪತ್ತೆಯಾದ ಹಣದ ಮೂಲ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಗರಾಜ್ ನನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆಯೇ ಆರೋಪಿಯ ಪರ ವಕೀಲ ಶ್ರೀರಾಮ್ ರೆಡ್ಡಿಯವರು ಕಾನೂನು ನೆರವನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ. ತನ್ನ ನಿರ್ದೇಶನಗಳನ್ನು ನಾಗರಾಜ್ ಕೇಳದೆ ಇರುವುದರಿಂದ ಕಾನೂನು ನೆರವನ್ನು ಹಿಂದಕ್ಕೆ ಪಡೆಯುತ್ತಿರುವುದಾಗಿ ಶ್ರೀರಾಮ್ ಅವರು ಹೇಳಿಕೊಂಡಿದ್ದಾರೆ.
ಶ್ರೀರಾಮ್ ಅವರು ಕಾನೂನು ನೆರವು ಹಿಂದಕ್ಕೆ ಪಡೆದುಕೊಂಡಿರುವ ಹಿನ್ನಲೆಯಲ್ಲಿ ರೌಡಿಶೀಟರ್ ನಾಗ ಮತ್ತೊಬ್ಬ ವಕೀಲರನ್ನು ನೇಮಿಸಿಕೊಂಡಿದ್ದಾನೆಂದು ಮೂಲಗಳು ತಿಳಿಸಿವೆ.
ಹೊಸದಾಗಿ ನೇಮಕಗೊಂಡಿರುವ ವಕೀಲ ನ್ಯಾಯಾಲಯದ ಮುಂದೆ ಕೆಲ ಮನವಿಗಳನ್ನು ಮಾಡಿಕೊಂಡಿದ್ದು, ವಿಚಾರಣೆ ವೇಳೆ ನಾಗರಾಜ್ ಅವರಿಗೆ ಥರ್ಡ್ ಡಿಗ್ರಿ ಟ್ರೀಟ್'ಮೆಂಟ್ ಕೊಡದಂತೆ ಮನವಿ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ಕಾನೂನು ನೆರವು ಹಿಂದಕ್ಕೆ ತೆಗೆದುಕೊಂಡಿರುವ ಕುರಿತಂತೆ ಮಾತನಾಡಿರುವ ಶ್ರೀರಾಮ್ ರೆಡ್ಡಿಯವರು, 20 ವರ್ಷಗಳಿಂದ ನಾಗರಾಜ್ ನನಗೆ ಗೊತ್ತು. ಈ 20 ವರ್ಷದಿಂದಲೂ ನಾನು ಅವರಿಗೆ ಕಾನೂನು ಸಲಹೆಗಳನ್ನು ನೀಡಿಕೊಂಡು ಬಂದಿದ್ದೇನೆ. ವಿಚಾರಣೆ ವೇಳೆ ವಿಡಿಯೋ ಮಾಡಲು ನ್ಯಾಯಾಲಯ ಅನುಮತಿ ನೀಡಿದ್ದು, ಪೊಲೀಸರಿಗೆ ಶರಣಾಗುವಂತೆ ಕೆಲ ದಿನಗಳ ಹಿಂದಷ್ಟೇ ನಾಗರಾಜ್'ಗೆ ತಿಳಿಸಿದ್ದೆ.
ಆದರೆ, ನನ್ನ ಸಲಹೆಯನ್ನು ಕೇಳದ ನಾಗರಾಜ್, ನಿರೀಕ್ಷಿತ ಜಾಮೀನು ನೀಡಲು ಉನ್ನತ ವಕೀಲರನ್ನು ಸಂಪರ್ಕಿಸುವಂತೆ ತಿಳಿಸಿದ್ದ. ಹೀಗಾಗಿ ನಾನು ನಾಗರಾಜ್ ನೀಡುತ್ತಿದ್ದ ಕಾನೂನು ನೆರವನ್ನು ಹಿಂದಕ್ಕೆ ಪಡೆದುಕೊಂಡಿದ್ದೇನೆ. ನಾಗರಾಜ್ ಬಂಧನಕ್ಕೊಳಗಾಗಿರುವ ಸುದ್ದಿ ನಿನ್ನೆಯಷ್ಟೇ ನನಗೆ ತಿಳಿದಿತ್ತು ಎಂದು ಹೇಳಿದ್ದಾರೆ.
ತನಿಖಾ ತಂಡಕ್ಕೆ ರೂ.2 ಲಕ್ಷ ಬಹುಮಾನ
ಭೂಗತನಾಗಿದ್ದ ಮಾಜಿ ಕಾರ್ಪೋರೇಟರ್ ನಾಗರಾಜ್ ಹಾಗೂ ಆತನ ಇಬ್ಬರು ಮಕ್ಕಳನ್ನು ಬಂಧಿಸಿದ ತನಿಖಾ ತಂಡಕ್ಕೆ ರೂ.2 ಲಕ್ಷ ಬಹುಮಾನವನ್ನು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಪ್ರಕಟಿಸಿದ್ದಾರೆ.
ತನ್ನ ಮನೆ ಮೇಲೆ ಪೊಲೀಸ್ ದಾಳಿ ಬಳಿಕ ಅಜ್ಞಾತವಾಸಿಯಾಗಿದ್ದ ರೌಡಿಶೀಟರ್ ನಾಗ ಹಾಗೂ ಆತನ ಪುತ್ರರಾದ ಶಾಸ್ತ್ರಿ ಮತ್ತು ಗಾಂಧಿ ತಮಿಳುನಾಡಿನ ವೆಲ್ಲೂರು ಸಮೀಪ ಅರ್ಕಾಟ್ ನಲ್ಲಿ ಪೂರ್ವ ವಿಭಾಗದ ಪೊಲೀಸರು ಸೆರೆ ಹಿಡಿದಿದ್ದರು. ಸವಾಲಿನ ಪ್ರಕರಣವನ್ನು ಬೇಧಿಸಿದ ತನಿಖಾ ತಂಡದ ಕಾರ್ಯವನ್ನು ಶ್ಲಾಘಿಸಿರುವ ಆಯುಕ್ತರು, ಬಹುಮಾನವನ್ನು ಘೋಷಿಸಿದ್ದಾರೆ.