ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಧ್ಯಾಪಕರ, ಗ್ರಂಥಪಾಲಕ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರ ಹಾಗೂ ಬೋಧಕೇತರರ ಕಡ್ಡಾಯ ವರ್ಗಾವಣೆಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ತಡೆ ನೀಡಿದ್ದು, ಇದರಿಂದ ಈಗಾಗಲೇ ಕೌನ್ಸಲಿಂಗ್ ಮೂಲಕ ಹೊಸ ಸ್ಥಳಕ್ಕೆ ನಿಯೋಜನೆಗೊಂಡಿರುವ ನೂರಾರು ಅಧ್ಯಾಪಕರ ಸ್ಥಿತಿ ಅತಂತ್ರವಾಗಿದೆ.
2014ರಲ್ಲೇ ರಾಜ್ಯ ಸರ್ಕಾರ ಕಡ್ಡಾಯ ವರ್ಗಾವಣೆಗೆ ಕಾನೂನು ರೂಪಿಸಿದ್ದರೂ ಅದು ಇದುವರೆಗೂ ಜಾರಿಗೆ ಬಂದಿಲ್ಲ. ಕಳೆದ ವರ್ಷ ಕಡ್ಡಾಯ ವರ್ಗಾವಣೆ ಜಾರಿಗೆ ತರಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿತ್ತು. ಆದರೆ ಇದಕ್ಕೆ ಪ್ರಮುಖವಾಗಿ ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ಠಿಕಾಣಿ ಹೂಡಿರುವ ಪ್ರಾಧ್ಯಾಪಕರು ವಿರೋಧ ವ್ಯಕ್ತಪಿಡಿಸಿದ್ದರಿಂದ ಜಾರಿಗೆ ಬಂದಿರಲಿಲ್ಲ.
ಪ್ರಸಕ್ತ ವರ್ಷದಿಂದ ಕಾಲೇಜು ಶಿಕ್ಷಣ ಇಲಾಖೆ ಕಡ್ಡಾಯ ವರ್ಗಾವಣೆಗೆ ಮುಂದಾಗಿದ್ದು, ಇದಕ್ಕಾಗಿ ಅಂತಿಮ ಜೇಷ್ಠತಾ ಪಟ್ಟಿಯನ್ನು ಮತ್ತು ಲಭ್ಯವಿರುವ ಖಾಲಿ ಹುದ್ದೆಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಅಲ್ಲದೆ ಸೇವಾ ಹಿರಿತನದ ಆಧಾರದ ಮೇಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೋಧಕ, ಗ್ರಂಥಪಾಲಕ, ದೈಹಿಕ ಶಿಕ್ಷಕ, ಬೋಧಕೇತರ ಸಿಬ್ಬಂದಿಗೂ ಜೇಷ್ಠತೆ ಆಧರಿಸಿ ಕಡ್ಡಾಯ ವರ್ಗಾವಣೆ ಜಾರಿಗೆ ತರಲು ರಾಜ್ಯದ ಕಾಲೇಜುಗಳನ್ನು ಎ, ಬಿ ಮತ್ತು ಸಿ ಎಂದು ವಲಯವಾರು ಗುರುತಿಸಲಾಗಿತ್ತು.
ಸಿ ವಲಯದಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕರು ಬಿ ಮತ್ತು ಎ ವಲಯಗಳನ್ನು ಆಯ್ಕೆ ಮಾಡಿಕೊಳ್ಳಲು ಹಾಗೂ ಬಿ ವಲಯದಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕರು ಎ ವಲಯದಲ್ಲಿ ಸ್ಥಳ ಆಯ್ಕೆ ಮಾಡಿಕೊಳ್ಳಲು ಕೌನ್ಸಲಿಂಗ್ ನಲ್ಲಿ ಅವಕಾಶ ನೀಡಿ, ಕಳೆದ ವಾರ ಕೌನ್ಸಲಿಂಗ್ ಸಹ ನಡೆಸಲಾಗಿದೆ. ಆದರೆ ಶಿಕ್ಷಣ ಇಲಾಖೆ ಕಡ್ಡಾಯ ವರ್ಗಾವಣೆಯಲ್ಲಿ ಶೇ.8ರಷ್ಟು ಮಿತಿಯನ್ನು ಮೀರಿ ವರ್ಗಾವಣೆ ಮಾಡಿದೆ ಎಂದು ಆರೋಪಿಸಿ ಎ ವಲದಯಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕರು ಕೋರ್ಟ್ ಮೊರೆ ಹೋಗಿದ್ದಾರೆ. ವಿಚಾರಣೆ ನಡೆಸಿದ ಕೆಎಟಿ ವರ್ಗಾವಣೆ ಅಧಿಸೂಚನೆಗೆ ತಡೆಯಾಜ್ಞೆ ನೀಡಿ, ಕಾಲೇಜು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿ, ವಿಚಾರಣೆಯನ್ನು ಮೇ 25ಕ್ಕೆ ಮುಂದೂಡಿದೆ.