ಬೆಂಗಳೂರು: ದೂರ ಶಿಕ್ಷಣ ಮೂಲಕ ದಾಖಲಾತಿ ಮಾಡಿಕೊಂಡ ಸುಮಾರು 2,500ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪ್ರವೇಶ ಪ್ರಕ್ರಿಯೆ ಮುಗಿದು 2 ತಿಂಗಳು ಕಳೆದ ನಂತರವೂ ಅಧ್ಯಯನ ಪಠ್ಯಗಳು ಇನ್ನೂ ಸಿಕ್ಕಿಲ್ಲ.
ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ವಿಶ್ವವಿದ್ಯಾಲಯ ಯೋಜನೆ ರೂಪಿಸಿದೆ. ಆದರೆ ದೂರ ಶಿಕ್ಷಣ ವಿಭಾಗದ ಅಧಿಕಾರಿಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ,ಅಭ್ಯರ್ಥಿಗಳಿಗೆ ಅಧ್ಯಯನ ಪಠ್ಯಗಳು ಜೂನ್ ಕೊನೆಯ ವಾರ ಅಥವಾ ಜುಲೈ ಮೊದಲ ವಾರದಲ್ಲಿ ಸಿಗುತ್ತದೆ.
ಈಗಾಗಲೇ ಪರೀಕ್ಷೆಗೆ ಕುಳಿತಿರುವ ಅಭ್ಯರ್ಥಿಗಳು ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ವಿದ್ಯಾರ್ಥಿಗಳು ಖುದ್ದಾಗಿ ಅಧಿಕಾರಿಗಳನ್ನು ಭೇಟಿಯಾದರೆ ಅಧ್ಯಯನ ಪಠ್ಯಗಳು ವಿದ್ಯುನ್ಮಾನ ಪ್ರತಿಯನ್ನು ನೀಡುತ್ತಾರೆ. ಕಳೆದ ಸೋಮವಾರ ವಿಶ್ವವಿದ್ಯಾಲಯಕ್ಕೆ ಹೋಗಿ ಅಧ್ಯಯನದ ವಿಷಯಗಳನ್ನು ಕೇಳಿದೆ. ಆದರೆ ಅವರು ನನ್ನಲ್ಲಿ ಪೆನ್ ಡ್ರೈವ್ ನೀಡಿ ಎಂದು ಹೇಳಿದರು. ಆದರೆ ನನ್ನಲ್ಲಿ ಆಗ ಪೆನ್ ಡ್ರೈವ್ ಇರಲಿಲ್ಲ ಎಂದು ಬಿ.ಎ ಕನ್ನಡಕ್ಕೆ ದಾಖಲಾತಿ ಮಾಡಿಕೊಂಡಿರುವ ಕೋಲಾರದ ಸರ್ವೇಶ್ ಹೇಳುತ್ತಾರೆ.
ಎಂ.ಎ ಕನ್ನಡಕ್ಕೆ ದಾಖಲಾತಿ ಮಾಡಿಕೊಂಡಿರುವ ಅಭ್ಯರ್ಥಿಯೊಬ್ಬರು, ಕೋರ್ಸ್ ಗೆ ರಿಜಿಸ್ಟರ್ ಮಾಡಿಕೊಂಡಾಗ ನಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಪಡೆದುಕೊಂಡರು. ಆದರೆ ಇಲ್ಲಿಯವರೆಗೆ ವಿಶ್ವವಿದ್ಯಾಲಯದಿಂದ ಯಾವುದೇ ಮಾಹಿತಿ ನಮಗೆ ಸಿಕ್ಕಿಲ್ಲ. ನಮಗೆ ಅಧ್ಯಯನ ಪಠ್ಯಗಳು ಸಿಗುತ್ತವೆಯೇ, ಇಲ್ಲವೇ ಎಂದು ತಿಳಿಸಬಹುದಾಗಿತ್ತು. ಆದರೆ ನಾವಾಗಿಯೇ ಏನಾಯಿತು ಎಂದು ಹೋಗಿ ಅವರನ್ನು ಕೇಳಬೇಕಾದ ಪರಿಸ್ಥಿತಿ ಬಂದಿದೆ ಎನ್ನುತ್ತಾರೆ.
ಎಸ್.ಕುಮಾರ್ ಮತ್ತೊಬ್ಬ ವಿದ್ಯಾರ್ಥಿ, ಅಧಿಕಾರಿಗಳು ಜವಾಬ್ದಾರಿಯಿಂದ ವರ್ತಿಸಬೇಕು. ಅಧಿಕೃತ ವೆಬ್ ಸೈಟ್ ನಲ್ಲಿ ಅಧ್ಯಯನ ಪಠ್ಯಗಳು ಮತ್ತು ಸಿಲೆಬಸ್ ನ್ನು ಅಪ್ ಲೋಡ್ ಮಾಡಬೇಕು ಎನ್ನುತ್ತಾರೆ.
ಯುಜಿಸಿ ಬೆಂಗಳೂರು ವಿಶ್ವವಿದ್ಯಾಲಯದ ದೂರ ಶಿಕ್ಷಣವನ್ನು 2014-15. 2015-16ರಲ್ಲಿ ನವೀಕರಿಸಿಲ್ಲ. ಎರಡು ವರ್ಷಗಳ ನಂತರ 2016-17ರಲ್ಲಿ ನವೀಕರಿಸಿದೆ.
ಅದರ ನಂತರ ಈ ವರ್ಷ ಮಾರ್ಚ್ ತಿಂಗಳಲ್ಲಿ ವಿಶ್ವವಿದ್ಯಾಲಯ ದೂರ ಶಿಕ್ಷಣಕ್ಕೆ ಪ್ರವೇಶಾತಿ ಆರಂಭಿಸಿತ್ತು. ಏಪ್ರಿಲ್ ವೇಳೆಗೆ ಪ್ರಕ್ರಿಯೆ ಮುಕ್ತಾಯವಾಯಿತು. ಪರೀಕ್ಷೆ ಜೂನ್-ಜುಲೈ ಹೊತ್ತಿಗೆ ನಡೆಸಬೇಕಾಗಿತ್ತು. ಆದರೆ ಪ್ರವೇಶ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಪರೀಕ್ಷೆಗಳನ್ನು ಸೆಪ್ಟೆಂಬರ್-ಅಕ್ಟೋಬರ್ ಗೆ ಮುಂದೂಡಲಾಗಿದೆ.
ದೂರ ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಷಡಕ್ಷರಯ್ಯ, ಅಧ್ಯಯನ ವಿಷಯದ ವಿದ್ಯುನ್ಮಾನ ಪ್ರತಿಯನ್ನು ಅಭ್ಯರ್ಥಿಗಳಿಗೆ ಒದಗಿಸುತ್ತೇವೆ. ಕೆಲವು ಕೋರ್ಸ್ ಗಳಿಗೆ ವಿಷಯ ತಜ್ಞರು ಉನ್ನತ ಮಟ್ಟದ ಸಮಿತಿಯ ನಿರ್ದೇಶನದಂತೆ ಅಧ್ಯಯನ ಪಠ್ಯಗಳು ತಿದ್ದುಪಡಿ ಮಾಡಿದ್ದಾರೆ ಎಂದು ಹೇಳಿದರು.