ಬೆಂಗಳೂರು: ಲಖನೌ ನಲ್ಲಿ ಕಳೆದ ವಾರ ಹತ್ಯೆಯಾಗಿರುವ ರಾಜ್ಯದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಂತರ ಹಳೆಯ ಹಗರಣವೊಂದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದರು ಎಂದು ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.
ಅನುರಾಗ್ ತಿವಾರಿ ಅನುಮಾನಾಸ್ಪದ ಸಾವಿನ ತನಿಖೆಯನ್ನು ಸಿಬಿಐ ಗೆ ವಹಿಸಲಾಗಿದೆ. ಐಎಎಸ್ ಅಧಿಕಾರಿಯ ನಿಗೂಢ ಸಾವಿನ ಬಗ್ಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿದ್ದು, ಅನುರಾಗ್ ತಿವಾರಿ ಅವರು ಇಲಾಖೆಯ ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಕೆಲವು ಕಡತಗಳಿಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದರು. ಹಳೆಯ ಹಗರಣಕ್ಕೆ ಸಂಬಂಧಿಸಿದ ಕಡತಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೂ ಬಿಡುವುದಿಲ್ಲ ಎಂದು ದೂರವಾಣಿಯಲ್ಲಿ ಹೇಳುತ್ತಿದ್ದದ್ದನ್ನು ಕೇಳಿಸಿಕೊಂಡಿದ್ದೇವೆ. ತಿವಾರಿ ಅವರು ದೂರವಾಣಿ ಮೂಲಕ ಮಾತನಾಡುತ್ತಿದ್ದರಾದರೂ ಯಾರೊಂದಿಗೆ ಮಾತನಾಡುತ್ತಿದ್ದಾರೆ ಎಂಬುದು ತಿಳಿಯುತ್ತಿರಲಿಲ್ಲ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಮಾಧ್ಯಮಗಳಿಗೆ ದೊರೆತಿರುವ ಮಾಹಿತಿಯ ಪ್ರಕಾರ ಆಹಾರ ಧಾನ್ಯಗಳ ಖರೀದಿ ಮಾಫಿಯಾಗೆ ಸಂಬಂಧಿಸಿದಂತೆ ತಿವಾರಿ ಮಾಹಿತಿ ಕಲೆಹಾಕುತ್ತಿದ್ದರು. ಖದೀರಿಯಾಗಿದ್ದ ಅಕ್ಕಿ ಹಾಗೂ ಗೋಧಿಯ ಒಟ್ಟು ಪ್ರಮಾಣ ಹಾಗೂ ಪಡಿತರ ಅಂಗಡಿಗಳಿಗೆ ಕಳಿಸಿಕೊಡಲಾದ ಧಾನ್ಯಗಳ ಪ್ರಮಾಣದ ಬಗ್ಗೆ ತಿವಾರಿ ಕಿರಿಯ ಅಧಿಕಾರಿಗಳ ತನಿಖೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ತಿವಾರಿ ಸಾವಿನ ಪ್ರಕರಣವನ್ನು ಸಿಬಿಐ ಗೆ ವಹಿಸಬೇಕೆಂದು ಆಗ್ರಹಿಸಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಸಂಸದೆ ಶೋಭಾ ಕರಂದ್ಲಾಜೆ ಬರೆದ ಪತ್ರದಲ್ಲಿಯೂ ಇದೇ ಅಂಶ ಉಲ್ಲೇಖವಾಗಿದ್ದು, ಹಗರಣವೊಂದರ ಬಗ್ಗೆ ವರದಿ ತಯಾರಿಸಿದ್ದ ತಿವಾರಿ ಅದನ್ನು ಸಿಬಿಐ ಗೆ ನೀಡುವವರಿದ್ದರು. ಆದರೆ ವರದಿ ನೀಡುವ ಮುನ್ನವೇ ಅವರನ್ನು ಹತ್ಯೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಅವರು ತಯಾರಿಸಿದ್ದ ವರದಿ, ವಿಚಾರಣೆಗೆ ಸಂಬಂಧಿಸಿದ ಕಡತಗಳು ಹಾಗೂ ಗೋದಾಮಿನ ಸಿಸಿಟಿವಿ ದೃಶ್ಯಾವಳಿಗಳನ್ನು ನಾಶ ಮಾಡಲಾಗಿದೆ ಎಂದು ಶೋಭಾ ಕರಂದ್ಲಾಜೆ ಪತ್ರದಲ್ಲಿ ಆರೋಪಿಸಿದ್ದಾರೆ.
ಆದರೆ ಆಹಾರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಇಲಾಖೆಯಲ್ಲಿ ಹಗರಣ ನಡೆದಿದೆ ಎಂಬುದನ್ನು ಒಪ್ಪಲು ನಿರಾಕರಿಸಿದ್ದು, ನಾವು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ(ಎಫ್ ಸಿಐ) ನಿಂದಲೇ ಆಹಾರ ಧಾನ್ಯಗಳನ್ನು ಖರೀದಿಸುತ್ತೇವೆ. ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸುವುದಿಲ್ಲ, ಕೇಂದ್ರ ಸರ್ಕಾರದ್ದೇ ಸಂಸ್ಥೆಯಾಗಿರುವ ಎಫ್ ಸಿಐ ನಿಂದ ಧಾನ್ಯಗಳನ್ನು ಖರೀದಿಸಿದರೆ ಹಗರಣ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.