ಉದ್ಘಾಟನೆಗೆ ಸಿದ್ಧಗೊಂಡಿರುವ ಶಾಲೆ
ಬೆಂಗಳೂರು: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಓದಿದ ಬೆಂಗಳೂರಿನ ಬಸವನಗುಡಿಯ ಗವಿಪುರಂನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ರಾಜ್ಯ ಸರ್ಕಾರ ಸಂಪೂರ್ಣ ನವೀಕರಿಸಿದ್ದು, ಐಟಿ ಕಂಪನಿಯ ಮಾದರಿಯಲ್ಲಿ ಸಿದ್ಧಗೊಂಡಿದೆ.
ಈ ಶಾಲೆಯ ನವೀಕರಣಕ್ಕಾಗಿ ಸರ್ಕಾರ 1.53 ಕೋಟಿ ರುಪಾಯಿ ಖರ್ಚು ಮಾಡಿದೆ. ಈಗಾಗಲೆ ನವೀಕರಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಮುಂದಿನ ತಿಂಗಳು ಶಾಲೆಯ ಹಳೆಯ ವಿದ್ಯಾರ್ಥಿ ರಜನಿಕಾಂತ್ ಅವರಿಂದಲೇ ಉದ್ಘಾಟಿಸುವ ಸಾಧ್ಯತೆ ಇದೆ.
1954ರಿಂದ 1959ರ ಅವಧಿಯಲ್ಲಿ ರಜನಿಕಾಂತ್ ಅವರು ಈ ಶಾಲೆಯಲ್ಲಿ 5ನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿದ್ದಾರೆ. ಏಳನೇ ತರಗತಿವರೆಗೂ ಶಿಕ್ಷಣ ನೀಡುತ್ತಿದ್ದ ಈ ಶಾಲೆಯನ್ನು ಈಗ 10ನೇ ತರಗತಿವರೆಗೂ ವಿಸ್ತರಿಸಲಾಗುತ್ತಿದೆ. ಶಿಥಿಲಾವಸ್ಥೆಯಲ್ಲಿದ್ದ ಸುಮಾರು 100 ವರ್ಷಗಳಷ್ಟು ಹಳೆಯದಾದ ಶಾಲೆಯ ಕಟ್ಟಡ ಸಂಪೂರ್ಣ ಹಾಳಾಗಿದ್ದು ಇಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಗೆ ಕನಿಷ್ಠ ಸೌಲಭ್ಯಗಳು ಇರಲಿಲ್ಲ. ಹೀಗಾಗಿ ಈ ಹಿಂದಿನ ಶಾಲಾ ಅಧ್ಯಕ್ಷ ಸೋಮಸುಂದರ್ ದಿಕ್ಷಿತ್ ಅವರು ಅಂದಿನ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎನ್.ಚದುರ್ವೇದಿ ಅವರಿಗೆ ಪತ್ರ ಬರೆದು ಬಿಬಿಎಪಿ ನಡೆಸುತ್ತಿರುವ ಈ ಶಾಲೆಯ ಕಟ್ಟಡ ನವೀಕರಿಸುವಂತೆ ಒತ್ತಾಯಿಸಿದ್ದರು.
ಕಳೆದ ಐದು ವರ್ಷಗಳಿಂದ ನಡೆಯುತ್ತಿದ್ದ ನವೀಕರಣ ಕಾರ್ಯ ಈಗ ಪೂರ್ಣಗೊಂಡಿದ್ದು, ಮೂರು ಅಂತಸ್ಥಿನ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಶಾಲೆ ಹೊಸದಾಗಿ 25 ಕಂಪ್ಯೂಟರ್, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಉತ್ತಮ ಗುಣಮಟ್ಟದ ಬ್ಲಾಕ್ ಬೋರ್ಡ್ ಹಾಗೂ ವಿದ್ಯಾರ್ಥಿಗಳ ರಕ್ಷಣೆ ದೃಷ್ಟಿಯಿಂದ ಸ್ಟೀಲ್ ಬ್ಯಾರಿಕೇಡ್ ಕಾಂಪೋಂಡ್ ನಿರ್ಮಿಸಲಾಗಿದೆ.
ತಾನು ಓದಿದ ಶಾಲೆಗೆ ತಾವು ರು.25 ಲಕ್ಷಗಳನ್ನು ಉದಾರವಾಗಿ ನೀಡುವುದಾಗಿ ರಜನಿಕಾಂತ್ ಭರವಸೆ ನೀಡಿದ್ದರು. ಈ ಶಾಲೆಗೆ ನೂರು ವರ್ಷಗಳ ಇತಿಹಾಸವಿದೆ. ಆದರೆ ಈ ಶಾಲೆಗೆ ಮೂಲ ಸೌಲಭ್ಯಗಳಿಲ್ಲದೆ ಬಾಗಿಲು ಮುಚ್ಚುವ ಹಂತ ತಲುಪಿತ್ತು. ಆದರೆ ಈಗ ಮರು ನಿರ್ಮಾಣಗೊಂಡು ಎಲ್ಲರನ್ನು ಆಕರ್ಷಿಸುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos