ಚಿತ್ರದುರ್ಗ: ಭಾರತೀಯ ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾನುವಾರ ಚಿತ್ರದುರ್ಗದ ಚಳ್ಳಕೆರೆಯಲ್ಲಿ ಉದ್ಘಾಟನೆಗೊಂಡಿರುವ ಮಾನವ ರಹಿತ ಯುದ್ಧ ವಿಮಾನ ಪರೀಕ್ಷಾ ಕೇಂದ್ರ ಪ್ರಾಮುಖ್ಯತೆ ಪಡೆದಿದ್ದು, ಡಿಆರ್ ಡಿಒ ಸ್ಥಾಪಿಸಿರುವ ಈ ಕೇಂದ್ರ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದೆ.
ಸ್ವದೇಶಿ ನಿರ್ಮಿತ ಮಾನವ ರಹಿತ ಯುದ್ಧ ವಿಮಾನ ಹೊಂದಬೇಕು ಎಂಬ ಮಹತ್ವಾಕಾಂಕ್ಷಿ ಉದ್ದೇಶದಿ ಹಿನ್ನಲೆಯಲ್ಲಿ 2008ರಲ್ಲಿ ಈ ಯೋಜನೆ ಸಿದ್ಧಪಡಿಸಲಾಗಿತ್ತು. ಅಂದೇ ಡಿಆರ್ ಡಿಒ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಈ ಯೋಜನೆಗೆ ಸುಮಾರು 1300 ಕೋಟಿ ರು. ವೆಚ್ಚವಾಗಬಹುದು ಎಂದು ಅಂದಾಜಿಸಿದ್ದರು. ಅಂತೆಯೇ ಯುದ್ಧ ವಿಮಾನ ಪರೀಕ್ಷಾ ಕೇಂದ್ರಕ್ಕೆ ಹಣವನ್ನು ಕೂಡ ಮೀಸಲಿಡಲಾಗಿತ್ತು. ಇನ್ನು ರಕ್ಷಣಾ ವ್ಯವಸ್ಥೆಗೆ ಪೂರಕವಾದ ವೈಮಾನಿಕ ಪ್ರಯೋಗಗಳನ್ನು ನಡೆಸಲು ವಿಶಾಲ ಪ್ರದೇಶದ ಅಗತ್ಯವಿದ್ದು, ಜತೆಗೆ ಕಡಿಮೆ ಮಳೆ ಬೀಳುವ ಪ್ರದೇಶಗಳೂ ಆಗಿರಬೇಕು ಎಂದು ವಿಜ್ಞಾನಿಗಳು ಸರ್ಕಾರಕ್ಕೆ ತಿಳಿಸಿದ್ದರು. ಹೀಗಾಗಿ ಕೇಂದ್ರಕ್ಕೆ ಸೂಕ್ತ ಜಾಗಕ್ಕೆ ಕೇಂದ್ರ ಸರ್ಕಾರ ಹುಡುಕಾಟ ನಡೆಸಿತ್ತು. ಆಗ ಸಿಕ್ಕಿದ್ದೇ ಚಿತ್ರದುರ್ಗದ ಚಳ್ಳಕೆರೆ. ಚಳ್ಳಕೆರೆಯಲ್ಲಿ ಸುಮಾರು 10,300 ಎಕರೆ ಭೂಮಿ ಖರೀದಿ ಮಾಡಿದ್ದ ಕೇಂದ್ರ ಸರ್ಕಾರ ಇದಕ್ಕಾಗಿ ಸುಮಾರು 12 ಕೋಟಿ ರು.ವ್ಯಯಿಸಿತ್ತು.
ವಿಜ್ಞಾನಿಗಳು ಕೂಡ ಕೇಂದ್ರ ಸ್ಥಾಪನೆಗೆ ಈ ಜಾಗ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟ ಹಿನ್ನಲೆಯಲ್ಲಿ ಚಳ್ಳಕೆರೆಯನ್ನು ಆಯ್ಕೆ ಮಾಡಿಕೊಂಡು ಇಲ್ಲಿ ಈ ವಿಜ್ಞಾನ ನಗರ ನಿರ್ಮಿಸಲಾಗಿದೆ. ಈ ಹಿಂದೆ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಮೀಸಲಿಡಲಾಗಿದ್ದ ಹಣದಲ್ಲೇ ಇಲ್ಲಿ ಅತ್ಯಾಧುನಿಕ ಮಾನವ ರಹಿತ ಯುದ್ಧ ವಿಮಾನ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಕೇಂದ್ರ ಸ್ಥಾಪನೆಗೆ ಸುಮಾರು 290 ಕೋಟಿ ರು.ವೆಚ್ಚವಾಗಿದೆ ಎಂದು ತಿಳಿದುಬಂದಿದೆ.
ಈ ವಾಯನೆಲೆ 28 ಕಿ.ಮೀ ಸುತ್ತಳತೆ ಹೊಂದಿದ್ದು, ಸುಮಾರು 10,500 ಎಕರೆ ಪ್ರದೇಶದಲ್ಲಿ ಈ ವಿಜ್ಞಾನ ನಗರಿ ತಲೆ ಎತ್ತಿದೆ. ಚಿತ್ರದುರ್ಗ ಜಿಲ್ಲಾ ಕೇಂದ್ರದಿಂದ 35 ಕಿಮೀ ದೂರದಲ್ಲಿದ್ದು, ಈ ಕೇಂದ್ರದ ಮೇಲೆ ಎಲ್ಲ ಭಾಗಗಳಿಂದಲೂ ರಾಡಾರ್ ಗಳ ಮೂಲಕ ತೀವ್ರ ನಿಗಾ ಇರಿಸಲಾಗಿದೆ. ಅಂತೆಯೇ ಭಾರತೀಯ ಸೇನೆ ಕೂಡ ಈ ಕೇಂದ್ರಕ್ಕೆ ರಕ್ಷಣೆ ಒದಗಿಸುತ್ತಿದ್ದು, ಕೇಂದ್ರದ ಒಳಭಾಗದಲ್ಲಿ ವಿಮಾನಗಳ ಪರೀಕ್ಷೆಗಾಗಿ ಸುಮಾರು 2.3 ಕಿಮೀ ಉದ್ದದ ರನ್ ವೇ ನಿರ್ಮಿಸಲಾಗಿದೆ. ಇನ್ನು ಇದರ ಹೊರಭಾಗದಲ್ಲಿ ಸುಮಾರು 3 ಕಿ.ಮೀ ಅಂತರದಲ್ಲಿ ಶಾಲೆ, ವೈದ್ಯಕೀಯ ಸೌಲಭ್ಯಗಳನ್ನು ಒಳಗೊಂಡ 200 ಎಕರೆ ಪ್ರದೇಶದ ಟೌನ್ ಶಿಪ್ ನಿರ್ಮಾಣವಾಗಿದೆ.
ಕಳೆದ 9 ತಿಂಗಳ ನಿರ್ಮಾಣ ಕಾರ್ಯದ ನಂತರ ಏರೋನಾಟಿಕಲ್ ಟೆಸ್ಟ್ ರೇಂಜ್ (ಎಟಿಆರ್) ಕಾಮಗಾರಿ ಕೆಲವು ತಿಂಗಳ ಹಿಂದೆಯೇ ಪೂರ್ಣಗೊಂಡಿದೆ. ಇದು ಪ್ರಯೋಗಕ್ಕೆ ಮುಕ್ತವಾಗಿದ್ದು ಈಗಾಗಲೇ ವಿಮಾನಗಳ ಹಾರಾಟ ಪರೀಕ್ಷೆ ನಡೆಯುತ್ತಿದ್ದು, ಹಲವು ವಿಜ್ಞಾನಿಗಳು ಇಲ್ಲಿ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೆಚ್ಚಿನ ವಿಜ್ಞಾನಿಗಳು ಚಳ್ಳಕೆರೆಯ ಸುತ್ತಮುತ್ತ ನೆಲೆಸಿದ್ದಾರೆ. ಹಿರಿಯ ಅಧಿಕಾರಿಗಳು ಮಾತ್ರ ಬೆಂಗಳೂರಿನಿಂದ ನಿಯಮಿತವಾಗಿ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.
ಈ ವಾಯುನೆಲೆ ಉದ್ಘಾಟನೆ ಆಗುವ ಮೊದಲೇ ಅಂದರೆ ಕಳೆದ ನವೆಂಬರಿನಲ್ಲಿ ಇಲ್ಲಿ ಮಾನವರಹಿತ ವಿಮಾನ ‘ತಪಸ್ 201'ವಿಮಾನದ ಪರೀಕ್ಷಾರ್ಥ ಹಾರಾಟ ನಡೆದು ಅದು ಯಶಸ್ವಿ ಕೂಡ ಆಗಿತ್ತು. ಈ ವಿಮಾನಕ್ಕೆ "ರುಸ್ತುಂ- 2" ಎಂದೂ ಕರೆಯುತ್ತಾರೆ. ಗಡಿಯಾಚೆ ಬೇಹುಗಾರಿಕೆ ನಡೆಸುವ ಜತೆಗೆ ಶತ್ರು ಪಡೆಗಳನ್ನು ಹೊಡೆದುರುಳಿಸುವ ವಿಶೇಷ ವಿಮಾನ ಇದಾಗಿದೆ. ಸುಮಾರು 200 ಕಿ.ಮೀ ದೂರದವರೆಗಿನ ಪ್ರದೇಶದಲ್ಲಿ ದಿನದ 24 ಗಂಟೆಯೂ ಹದ್ದಿನ ಕಣ್ಣಿಟ್ಟು, ಸೇನೆಯ ಮೂರೂ ಪಡೆಗಳಿಗೆ ಚಿತ್ರ ಸಹಿತ ಮಾಹಿತಿ ರವಾನಿಸುವ ಕೆಲಸವನ್ನು ಇದು ಮಾಡಲಿದೆ. ಮುಂದಿನ ದಿನಗಳಲ್ಲಿ, ದೇಶೀಯ ನಿರ್ಮಾಣದ ಮಾನವರಹಿತ ಯುದ್ಧ ವಿಮಾನಗಳ ಪರೀಕ್ಷಾರ್ಥ ಹಾರಾಟ ಇಲ್ಲಿ ನಡೆಯಲಿದೆ.