ರಾಜ್ಯ

ಐಸಿಎಸ್ ಇ 10ನೇ ತರಗತಿ ಫಲಿತಾಂಶ: ಬೆಂಗಳೂರಿನ ಅಶ್ವಿನ್ ರಾವ್ ದೇಶಕ್ಕೆ ಪ್ರಥಮ

Sumana Upadhyaya
ಬೆಂಗಳೂರು: ಇಂದು ಪ್ರಕಟಗೊಂಡ ಐಸಿಎಸ್ಇ ಮತ್ತು ಐಎಸ್ ಸಿ ಪರೀಕ್ಷೆಯಲ್ಲಿ ರಾಜ್ಯದ ವಿದ್ಯಾರ್ಥಿಗಳು ಕೂಡ ಉತ್ತಮ ಸಾಧನೆ ಮಾಡಿದ್ದಾರೆ. 10 ಮತ್ತು 12ನೇ ತರಗತಿಯಲ್ಲಿ ಕ್ರಮವಾಗಿ ಶೇಕಡಾ 99.8  ಹಾಗೂ ಶೇಕಡಾ 99.04 ಅಂಕ ಗಳಿಸಿದ್ದಾರೆ.
ಬೆಂಗಳೂರಿನ ಸೈಂಟ್ ಪೌಲ್ ಇಂಗ್ಲಿಷ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಅಶ್ವಿನ್ ರಾವ್ ಮತ್ತು ಪುಣೆಯ ಹಚಿಂಗ್ಸ್ ಹೈಸ್ಕೂಲ್ ನ ಮುಸ್ಕಾನ್ ಅಬ್ದುಲ್ಲಾ ಪಠಾಣ್ ಶೇಕಡಾ 99.4 ಅಂಕ ಗಳಿಸುವ ಮೂಲಕ ದೇಶಕ್ಕೆ ಮೊದಲಿಗರಾಗಿದ್ದಾರೆ.
ಬೆಂಗಳೂರಿನ ಮಲ್ಯ ಅದಿತಿ ಇಂಟರ್ ನ್ಯಾಷನಲ್ ಶಾಲೆಯ ನಿಕೋಲ್ ಮೇರಿಯಲ್ ಜೋಸೆಫ್ 12ನೇ ತರಗತಿಯಲ್ಲಿ ಶೇಕಡಾ 98.5 ಅಂಕ ಪಡೆದು ಮೊದಲಿಗರಾಗಿದ್ದಾನೆ.
10ನೇ ತರಗತಿಯಲ್ಲಿ ಶೇಕಡಾ 99.92ರಷ್ಟು ಬಾಲಕಿಯರು ತೇರ್ಗಡೆ ಹೊಂದಿದ್ದು, 12ನೇ ತರಗತಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 99.68ರಷ್ಟಿದೆ. 
12ನೇ ತರಗತಿಯಲ್ಲಿ ತೇರ್ಗಡೆ ಹೊಂದಿದ ಬಾಲಕಿಯರ ಸಂಖ್ಯೆ ಶೇಕಡಾ 99.71ರಷ್ಟಿದ್ದು, ಬಾಲಕರ ಸಂಖ್ಯೆ ಶೇಕಡಾ 98.35ರಷ್ಟಿದೆ. 
ಐಸಿಎಸ್ಇ ಪರೀಕ್ಷೆಗಳನ್ನು 57 ಲಿಖಿತ ವಿಷಯಗಳಲ್ಲಿ ನಡೆಸಲಾಗಿತ್ತು. 22 ಭಾರತೀಯ ಭಾಷೆಗಳು ಮತ್ತು 9 ವಿದೇಶಿ ಭಾಷೆಗಳು ಇದ್ದವು.
ಐಎಸ್ ಸಿ ಪರೀಕ್ಷೆಯನ್ನು 50 ಲಿಖಿತ ವಿಷಯಗಳಲ್ಲಿ ಅಂದರೆ 16 ಭಾರತೀಯ ಮತ್ತು 5 ವಿದೇಶಿ ಭಾಷೆಗಳಲ್ಲಿ ನಡೆಸಲಾಗಿತ್ತು. ಈ ವರ್ಷ ಕರ್ನಾಟಕದಲ್ಲಿ 15,370 ವಿದ್ಯಾರ್ಥಿಗಳು 10ನೇ ತರಗತಿಯಿಂದ ಮತ್ತು 1,356 ವಿದ್ಯಾರ್ಥಿಗಳು 12ನೇ ತರಗತಿಯಿಂದ ಪರೀಕ್ಷೆ ಬರೆದಿದ್ದರು.
SCROLL FOR NEXT