ಬೆಂಗಳೂರು: ವಾಡಿಕೆಗಿಂತ ಎರಡು ದಿನ ಮೊದಲು ನೈರುತ್ಯ ಮುಂಗಾರು ಕೇರಳ ಪ್ರವೇಶಿಸಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಮುಂದಿನ ಮೂರರಿಂದ ನಾಲ್ಕು ದಿನಗಳಲ್ಲಿ ಅಂದರೆ ಜೂನ್ 4 ರಂದು ಕರ್ನಾಟಕದ ಕರಾವಳಿ ಮತ್ತು ಒಳನಾಡು ಪ್ರದೇಶಗಳಿಗೂ ಮುಂಗಾರು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಬಾಂಗ್ಲಾದೇಶ ಕರಾವಳಿಯನ್ನು ಮಂಗಳವಾರ ಹಾದು ಹೋದ ‘ಮೊರಾ’ ಚಂಡಮಾರುತ, ಈಶಾನ್ಯ ಭಾಗಗಳಲ್ಲಿ ನೈರುತ್ಯ ಮುಂಗಾರಿನ ಪ್ರವೇಶಕ್ಕೆ ಒತ್ತಾಸೆ ನೀಡಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸುಂದರ್ ಎಂ ಮೆಟ್ರಿ ತಿಳಿಸಿದ್ದಾರೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಕಳೆದ ಕೆಲ ವರ್ಷಗಳಿಂದ ಬರದಿಂದ ಬಸವಳಿದಿರುವ ರಾಜ್ಯಕ್ಕೆ ಮಳೆಯು ನವ ಉತ್ಸಾಹ ತುಂಬಲಿದೆ. ನಮ್ಮ ಜಲಾಶಯಗಳೆಲ್ಲ ಬರಿದಾಗಿವೆ. ಆದರೆ, ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣ ಕೇಂದ್ರದ ವಿಜ್ಞಾನಿ ಎಸ್ಎಸ್ ಎಂ ಗವಾಸ್ಕರ್ ಹೆಳಿದ್ದಾರೆ.
ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮುಂದಿನ ಕೆಲ ದಿನಗಳಲ್ಲಿ ಅಧಿಕ ಮಳೆಯಾಗುವ ಸಾಧ್ಯತೆಯಿದೆ. ಹಾಗೂ ಉತ್ತರ ಒಳನಾಡಿನಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.