ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ
ರಾಯಚೂರು: ಖಾಸಗಿ ಬಸ್'ಗಳ ಆನ್'ಲೈನ್ ಟಿಕೆಟ್ ಬುಕ್ಕಿಂಗ್ ಗಳನ್ನು ಶೀಘ್ರದಲ್ಲಿಯೇ ಬಂದ್ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ಅವರು ಬುಧವಾರ ಹೇಳಿದ್ದಾರೆ.
ರಾಯಚೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಖಾಸಗಿ ಬಸ್ ಗಳ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ನಿಂದಾಗಿ ರಾಜ್ಯ ಸಾರಿಗೆ ಸಂಸ್ಥೆಗೆ ನಷ್ಟವನ್ನು ಎದುರಿಸುತ್ತಿದೆ. ಖಾಸಗಿ ಬಸ್ ಗಳ ಟಿಕೆಟ್ ಗಳು ಆನ್ ಲೈನ್ ಗಳಲ್ಲೇ ಲಭ್ಯವಿರುವುದರಿಂದ ಹೆಚ್ಚಿನ ಸಂಖ್ಯೆಯ ಜನರು ಅವುಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಖಾಸಗಿ ಬಸ್ ಗಳ ಆನ್ ಲೈನ್ ಟಿಕೆಟ್ ಬುಕ್ಕಿಂಗ್'ನ್ನು ಶೀಘ್ರದಲ್ಲಿಯೇ ಬಂದ್ ಮಾಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ಸಾರಿಗೆ ಇಲಾಖೆ ಕೈಗೊಂಡಿರುವ ನಿರ್ಧಾರ ಜಾರಿಗೆ ಬಂದಿದ್ದ ಆದರೆ, ಖಾಸಗಿ ಬಸ್ ಗಳಿಗೆ ಭಾರೀ ಹೊಡೆತ ಬೀಳಲಿದೆ ಎಂದು ಹೇಳಲಾಗುತ್ತಿದೆ.
ಒಂದೆಡೆ ಖಾಸಗಿ ಬಸ್ ಗಳ ಆನ್ ಲೈನ್ ಟಿಕೆಟ್ ಗಳನ್ನು ಬಂದ್ ಮಾಡಿಸಲು ಮುಂದಾಗಿರುವ ಸರ್ಕಾರ, ಮತ್ತೊಂದೆಡೆ ಸರ್ಕಾರಿ ಬಸ್ ಗಳ ಆನ್ ಲೈನ್ ಟಿಕೆಟ್ ಸೌಲಭ್ಯಗಳನ್ನು ಎಂದಿನಂತೆ ಮುಂದುವರೆಯಲಿದೆ ಎಂದು ತಿಳಿಸಿದೆ. ಅಲ್ಲದೆ, ಖಾಸಗಿ ಬಸ್ ಗಳು ಪ್ರಯಾಣಿಕರಿಂದ ಮಾಡುತ್ತಿರುವ ದುಬಾರಿ ಹಣ ವಸೂಲು ತಡೆಯಲು ಅಗತ್ಯ ನಿಯಮಗಳನ್ನು ಜಾರಿಗೊಳಿಸಲಾಗುತ್ತೆದ ಎಂದು ಸಚಿವ ರೇವಣ್ಣ ಅವರು ತಿಳಿಸಿದ್ದಾರೆ.
ಈಶಾನ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ 800 ಹೊಸ ಬಸ್ ಮಂಜೂರಿಗೆ ಬೇಡಿಕೆಯಿದೆ. ಆದರೆ, ಮೊದಲ ಹಂತದಲ್ಲಿ 200 ಹೊಸ ಬಸ್ ಗಳನ್ನು ಶೀಘ್ರವೇ ಒದಗಿಸಲಾಗುತ್ತದೆ ಎಂದಿದ್ದಾರೆ.
100ಸಿಸಿ ಬೈಕ್ ಗಳ ಮೇಲೆ ಕೇವಲ ಒಬ್ಬರು ಸಂಚರಿಸಬಹುದು ಎಂಬ ಆದೇಶವನ್ನು ಹೈಕೋರ್ಟ್ ಸೂಚನೆಯಂತೆ ಹೊರಡಿಸಲಾಗಿದೆ. ರಾಜ್ಯದ ಜನತೆಯ ಒತ್ತಾಯ ಆಧರಿಸಿ ಮೊದಲಿನ ಪದ್ಧತಿಯಂತೆಯೇ 100 ಸಿಸಿ ಬೈಕ್ ನಲ್ಲಿ ಇಬ್ಬರಿಗೆ ಸಂಚರಿಸಲು ಅವಕಾಶ ನೀಡುವಂತೆ ಶೀಘ್ರದಲ್ಲಿಯೇ ನ್ಯಾಯಾಲಯಕ್ಕೆ ಮನವಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics