ಮಡಿಕೇರಿ: ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿಗಾಗಿ ಭಾರತೀಯ ಸೇನೆಯ ಮೊದಲ ಭಾರತೀಯ ಕಮಾಂಡರ್ ಇನ್ ಚೀಫ್ (ಸಿ-ಇನ್-ಸಿ) ಆಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರಿಯಪ್ಪ ಅವರನ್ನು ಶಿಫಾರಸು ಮಾಡಲು ಇದು ಸೂಕ್ತ ಸಮಯವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ತಿಳಿಸಿದ್ದಾರೆ.
ಕರ್ನಾಟಕದ ಕೊಡಗು ಜಿಲ್ಲೆಯ ಮಡಿಕೇರಿಯ ಕಾವೇರಿ ಕಾಲೇಜಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಮತ್ತು ಪದ್ಮ ಭೂಷಣ ಜನರಲ್ ತಿಮಯ್ಯ ಅವರ ಮೂರ್ತಿಗಳನ್ನು ಅನಾವರಣ ಮಾಡಲು ಇಲ್ಲಿಗೆ ಆಗಮಿಸಿದ್ದ ಜನರಲ್ ಬಿಪಿನ್ ರಾವತ್ "ಭಾರತ ರತ್ನ ಪ್ರಶಸ್ತಿಗೆ ಕಾರಿಯಪ್ಪ ಅವರ ಹೆಸರು ಸೂಚಿಸಲು ಸೂಕ್ತ ಸಮಯ ಇದಾಗಿದೆ" ಎಂದರು. "ಬೇರೆಯವರು ಈ ಪ್ರಶಸ್ತಿ ಪಡೆಯಬಹುದಾದರೆ ಕಾರಿಯಪ್ಪ ನವರೂ ಈ ಪುರಸ್ಕಾರಕ್ಕೆ ಅರ್ಹರಾಗಿದ್ದಾರ ಎನ್ನುವುದು ಅಷ್ಟೇ ಸತ್ಯ." ರಾವತ್ ಹೇಳಿದರು.
ಫೀಲ್ಡ್ ಮಾರ್ಷಲ್ ಕೊಡಂದೆರ ಮಾದಪ್ಪ ಕಾರಿಯಪ್ಪ ಬ್ರಿಟೀಷರ ಕಾಲದಲ್ಲೇ ಭಾರತೀಯ ಸೇನೆಯ ಮೊದಲ ಭಾರತೀಯ ದಂಡನಾಯಕರಾಗಿದ್ದರು. ಅವರು 1947 ರ ಬಾರತ-ಪಾಕಿಸ್ತಾನ ಯುದ್ಧದಲ್ಲಿ ಪಶ್ಚಿಮ ಸೈನ್ಯದ ಮುಖ್ಯ ಅಧಿಕಾರಿಯಾಗಿ ಭಾರತೀಯ ಪಡೆಗಳನ್ನು ಮುನ್ನಡೆಸಿದರು.
ಕಾರಿಯಪ್ಪ ಅವರು ಭಾರತೀಯ ಸೇನೆಯಲ್ಲಿ ಫೈವ್ ಸ್ತಾರ್ ಗಳಿಸಿದ್ದ ಇಬ್ಬರು ಸೇನಾ ಪ್ರಮುಖರಲ್ಲಿ ಒಬ್ಬರಾಗಿದ್ದರು. ಇವರು 1949ರಲ್ಲಿ ಜನರಲ್ ಆಗಿ ಬಡ್ತಿಯನ್ನು ಪಡೆದರಲ್ಲದೆ ಭಾರತೀಯ ಸೈನ್ಯದ ಅತಿ ವರಿಷ್ಠ ನಾಯಕರಾಗಿ (ಕಮಾಂಡರ್ ಇನ್ ಚೀಫ್ (ಸಿ-ಇನ್-ಸಿ)) ನೇಮಕಗೊಂದರು.
ಕಾರಿಯಪ್ಪ ಅವರು ಕೆಲವು ವರ್ಷಗಳವರೆಗೆ ಚಿಕಿತ್ಸೆ ಪಡೆದಿದ್ದ ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ, 1994 ರ ಮೇ 15 ರಂದು ತಮ್ಮ 94 ನೇ ವಯಸ್ಸಿನಲ್ಲಿ ನಿಧನರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics